ಶಾಲೆಗೆ ನುಗ್ಗಿ ಯುವಕನನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

Update: 2018-03-24 05:23 GMT

ಚಂಡೀಗಢ, ಮಾ. 24: ಹರ್ಯಾಣದ ಸೋನೇಪತ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ 18 ವರ್ಷದ ಯುವಕನೊಬ್ಬನನ್ನು ಗುಂಡಿಟ್ಟು ಸಾಯಿಸಲಾಗಿದೆ. ಮೃತ ಯುವಕನ ಅಣ್ಣನನ್ನು ಕೂಡಾ ಇದೇ ವ್ಯಕ್ತಿ ಐದು ತಿಂಗಳ ಹಿಂದೆ ಹತ್ಯೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಮಡಿನಾ ಗ್ರಾಮದ ರಾಜೇಶ್ ಸಿಂಗ್ ಎಂಬ ಯುವಕ, ಬಾಲಕಿಯರ ಸರ್ಕಾರಿ ಹಿರಿಯ ಸೆಕೆಂಡರಿ ಶಾಲೆಯಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ಸಹೋದರಿಗಾಗಿ ಆಟದ ಮೈದಾನದಲ್ಲಿ ಕಾಯುತ್ತಿದ್ದ. ಬಿಳಿ ಬಣ್ಣದ ಸೆಡಾನ್ ಕಾರಿನಲ್ಲಿ ಬಂದ ನಾಲ್ವರು ರಾಜೇಶ್‌ನತ್ತ ಗುಂಡು ಹಾರಿಸಿದರು. 10 ಬಾರಿ ಈತನಿಗೆ ಗುಂಡು ಹೊಡೆಯಲಾಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ರಾಜೇಶ್‌ನ ಸ್ನೇಹಿತ ಸಾವನ್ ಕುಮಾರ್ ಕೂಡಾ ಆತನ ಪಕ್ಕದಲ್ಲೇ ಕುಳಿತಿದ್ದ. ಆತನ ಹೊಟ್ಟೆಗೂ ಗುಂಡು ತಗುಲಿದೆ. ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ದೇಹಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

10ನೇ ತರಗತಿ ಪರೀಕ್ಷೆ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಪೊಲೀಸರನ್ನು ನಿಯೋಜಿಸಿದ್ದರೂ, ಹಂತಕರನ್ನು ಬಂಧಿಸುವಲ್ಲಿ ಪೊಲಿಸರು ವಿಫಲರಾಗಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಸುಭಾಷ್‌ಚಂದ್ರ ಅವರು ಗುಂಡೇಟಿನ ಸದ್ದು ಕೇಳಿ ಆಟದ ಮೈದಾನದತ್ತ ಧಾವಿಸಿದರು. ಆಗ ರಾಜೇಶ್ ಮೃತಪಟ್ಟು ಆತನ ಸ್ನೇಹಿತ ಗಾಯಗೊಂಡಿರುವುದು ಕಂಡುಬಂತು. ಹಂತಕರು ಕಾರಿನಲ್ಲಿ ಪರಾರಿಯಾಗುವುದು ಕಂಡರೂ ಅವರನ್ನು ಹಿಡಿಯುವುದು ಸಾಧ್ಯವಾಗಲಿಲ್ಲ.

ಗ್ರಾಮಸ್ಥರು ನಾಲ್ವರ ಪೈಕಿ ಇಬ್ಬರ ಗುರುತು ಪತ್ತೆ ಮಾಡಿದ್ದು, ಅದೇ ಗ್ರಾಮದ ಸೀತಾ ಹಾಗೂ ಪವನ್ ಎಂದು ಗುರುತಿಸಲಾಗಿದೆ. ರಾಜೇಶ್‌ನ ಅಣ್ಣ ರಾಕೇಶ್‌ನನ್ನು ಅವರು ಹಳೆದ್ವೇಷದಿಂದ ಕಳೆದ ಅಕ್ಟೋಬರ್‌ನಲ್ಲಿ ಹತ್ಯೆ ಮಾಡಿದ್ದರು. ಈ ಬಗ್ಗೆ ಪ್ರಕರಣವೂ ದಾಖಲಾಗಿತ್ತು. ಈ ಹತ್ಯೆ ಪ್ರಕರಣಕ್ಕೆ ರಾಜೇಶ್ ಪ್ರತ್ಯಕ್ಷ ಸಾಕ್ಷಿಯಾಗಿದ್ದ. 11 ಮಂದಿ ಆರೋಪಿಗಳ ಪೈಕಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಸೀತಾ ಹಾಗೂ ಪವನ್ ತಲೆಮರೆಸಿಕೊಂಡಿದ್ದರು ಎಂದು ಇನ್‌ಸ್ಪೆಕ್ಟರ್ ವೀರ್‌ಭಾನ್ ವಿವರ ನೀಡಿದ್ದಾರೆ.

ಘಟನೆಯಿಂದ ಉದ್ರಿಕ್ತರಾದ ರಾಜೇಶ್ ಕುಟುಂಬದ ಸದಸ್ಯರು ಮೃತದೇಹವನ್ನು ಇಟ್ಟುಕೊಂಡು ರೋಹ್ಟಕ್- ಪಾಣಿಪತ್ ರಾಷ್ಟ್ರೀಯ ಹೆದ್ದಾರಿಯನ್ನು ತಡೆದರು. "ನನ್ನ ಹಿರಿಯ ಮಗ ರಾಕೇಶ್‌ನನ್ನು ಹತ್ಯೆ ಮಾಡಲಾಗಿತ್ತು. ಇದರ ಆರೋಪಿಗಳಾದ ಸೀತಾ ಹಾಗೂ ಪವನ್ ಬಗ್ಗೆ ಹಲವು ಬಾರಿ ಮಾಹಿತಿ ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಕಿರಿಯ ಮಗನನ್ನೂ ಅವರು ಹತ್ಯೆ ಮಾಡಿದ್ದಾರೆ" ಎಂದು ತಂದೆ ಜೈಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News