ಫುಟ್ಬಾಲ್‌ನಲ್ಲೂ ಮಿಂಚಿದ ಬೋಲ್ಟ್!

Update: 2018-03-24 16:27 GMT

ಡಾರ್ಟ್ಮಂಡ್ (ಜರ್ಮನಿ), ಮಾ.24: ಒಲಿಂಪಿಕ್ಸ್‌ನಲ್ಲಿ 8 ಬಾರಿ ಚಿನ್ನದ ಪದಕ ಜಯಿಸಿರುವ ವಿಶ್ವ ಶ್ರೇಷ್ಠ ಅಥ್ಲೀಟ್ ಉಸೇನ್ ಬೋಲ್ಟ್ ಇದೀಗ ತನ್ನಲ್ಲಿನ ಫುಟ್ಬಾಲ್ ಕೌಶಲ್ಯದಿಂದ ಗಮನ ಸೆಳೆಯುತ್ತಿದ್ದಾರೆ. ಜರ್ಮನಿಯ ಫುಟ್ಬಾಲ್ ಕ್ಲಬ್ ಬೊರುಷಿಯಾ ಡಾರ್ಟ್ಮಂಡ್‌ನೊಂದಿಗೆ ಶುಕ್ರವಾರ ಮತ್ತೊಮ್ಮೆ ತರಬೇತಿ ಪಂದ್ಯ ಆಡಿದರು. ಆದರೆ, ಈ ಬಾರಿ ಅವರು ಸುಮಾರು 1,500 ಪ್ರೇಕ್ಷಕರ ಸಮ್ಮುಖದಲ್ಲಿ ಹೆಡರ್ ಮೂಲಕ ಗೋಲು ಬಾರಿಸಿ ಗಮನ ಸೆಳೆದರಲ್ಲದೆ, ಪೆನಾಲ್ಟಿ ಕಿಕ್‌ನಲ್ಲೂ ಪಾಲ್ಗೊಂಡು ತಮ್ಮಲ್ಲಿನ ಫುಟ್ಬಾಲ್ ಕಲೆಯನ್ನು ತೋರ್ಪಡಿಸಿದರು. 31ರ ಹರೆಯದ ಬೋಲ್ಟ್ 2017ರ ವಿಶ್ವ ಚಾಂಪಿಯನ್‌ಶಿಪ್ ವೇಳೆ ಅಥ್ಲೀಟ್‌ಗೆ ವಿದಾಯ ಹೇಳಿದ್ದರು. ಈ ವಾರ ಬುಂಡೆಸ್ಲಿಗ ತಂಡದೊಂದಿಗೆ ಸಹಿ ಹಾಕುವ ಮೂಲಕ ವೃತ್ತಿಪರ ಫುಟ್ಬಾಲ್ ಆಟಗಾರನಾಗುವ ಕನಸು ಈಡೇರಿಸಿಕೊಳ್ಳುವ ಸೂಚನೆ ನೀಡಿದ್ದಾರೆ.

ಡಾರ್ಟ್ಮಂಡ್ ಕೋಚ್ ಪೀಟರ್ ಸೋಗೆರ್ ಮಾರ್ಗದರ್ಶನದಲ್ಲಿ ತಂಡದೊಂದಿಗೆ ಅಭ್ಯಾಸ ನಡೆಸಿದ ಬೋಲ್ಟ್ ಜರ್ಮನಿಯ ಮಿಡ್ ಫೀಲ್ಡರ್ ಮರಿಯೊ ಗೊಟ್ಝೆ ಹಾಗೂ ಇತರ ಯುವ ಆಟಗಾರರೊಂದಿಗೆ ಫಾರ್ವರ್ಡ್ ಆಟಗಾರನಾಗಿ ಆಡಿದರು.

ಓಟದ ರಾಜ ಖ್ಯಾತಿಯ ಬೋಲ್ಟ್ ಫುಟ್ಬಾಲ್ ಆಟವನ್ನು ವೀಕ್ಷಿಸಲು 1,409 ಪ್ರೇಕ್ಷಕರು ಹಾಗೂ 137 ಮಾನ್ಯತೆಯಿರುವ ಪತ್ರಕರ್ತರು ಆಗಮಿಸಿದ್ದರು. ಡಾರ್ಟ್ಮಂಡ್ ತಂಡ ಅಭ್ಯಾಸದ ನೇರ ಪ್ರಸಾರವನ್ನು ಇಂಗ್ಲೀಷ್ ವೀಕ್ಷಕವಿವರಣೆ ಮೂಲಕ ಪ್ರಸಾರ ಮಾಡಿತು. ಬೋಲ್ಟ್ ಯುಬಿ 09 ಎಂದು ಬರೆದಿರುವ ಶರ್ಟ್‌ನ್ನು ಧರಿಸಿ ಆಡಿದರು. ಅಭ್ಯಾಸ ಮುಗಿದ ಬಳಿಕ ಸಹ ಆಟಗಾರರ ಕೈಕುಲುಕಿ, ಫೋಟೊ ತೆಗೆಸಿಕೊಂಡ ಬೋಲ್ಟ್ ತನ್ನ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದರು.

ಬೋಲ್ಟ್ 2009ರ ಅಕ್ಟೋಬರ್‌ನಲ್ಲಿ ನಡೆದ ಚಾರಿಟಿ ಕ್ರಿಕೆಟ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News