ಲಂಕಾ: ಮುಸ್ಲಿಮ್ ವಿರೋಧಿ ಗಲಭೆ ನಡೆಸಿದ ಗುಂಪಿನಿಂದ ರಾಜಕೀಯ ಪಕ್ಷ ಸ್ಥಾಪನೆ

Update: 2018-03-24 16:32 GMT

ಕೊಲಂಬೊ, ಮಾ. 24: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆಯ ವೇಳೆ ಮುಸ್ಲಿಮರ ವಿರುದ್ಧ ನಡೆದ ಆಕ್ರಮಣಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತ್ತೆನ್ನಲಾದ ಉಗ್ರವಾದಿ ಸಿಂಹಳ-ಬೌದ್ಧ ಗುಂಪು, ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲು ನಿರ್ಧರಿಸಿದೆ.

ಪಕ್ಷವನ್ನು ನೋಂದಣಿ ಮಾಡುವಂತೆ ಕೋರಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ‘ಮಹಾಸೊನ್ ಬಾಲಕಾಯ’ (ಪಿಶಾಚಿ ಮಹಾಸೊನನ ಪಡೆ) ಹೇಳಿದೆ.

ಇತ್ತೀಚಿನ ಗಲಭೆಯ ವೇಳೆ ಅದು ಮುಸ್ಲಿಮರ ವಿರುದ್ಧ ದ್ವೇಷಕಾರುವ ವೀಡಿಯೊಗಳನ್ನು ವ್ಯಾಪಕವಾಗಿ ಪ್ರಸಾರಗೊಳಿಸಿತ್ತು ಎನ್ನಲಾಗಿದೆ.

‘‘ಪ್ರತಿಯೊಂದು ಜನಾಂಗಕ್ಕೂ ಒಂದೊಂದು ರಾಜಕೀಯ ಪಕ್ಷಗಳಿವೆ. ಆದರೆ, ಸಿಂಹಳೀಯರಿಗೆ ಒಂದೂ ಇಲ್ಲ. ಮಹಾಸೊನ್ ಬಾಲಕಾಯ ಮತ್ತು ಇತರ ಹಲವಾರು ಸಿಂಹಳ ಸಂಘಟನೆಗಳ ಸಹಕಾರದೊಂದಿಗೆ ನೂತನ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ’’ ಎಂದು ಮಹಾಸೊನ್ ಬಾಲಕಾಯದ ವಕ್ತಾರರೊಬ್ಬರು ದೇಶದ ಮಧ್ಯ ಭಾಗದ ಪಟ್ಟಣ ಅನುರಾಧಪುರದಲ್ಲಿ ಹೇಳಿದರು.

ಇತ್ತೀಚೆಗೆ ಕ್ಯಾಂಡಿ ಮತ್ತು ಅಂಪಾರ ಜಿಲ್ಲೆಗಳಲ್ಲಿ ನಡೆದ ಕೋಮುಗಲಭೆಯ ವೇಳೆ, ಮಹಾಸೊನ್ ಬಾಲಕಾಯ ಸಂಘಟನೆಯು ಮುಸ್ಲಿಮರು, ಅವರ ಧಾರ್ಮಿಕ ಸ್ಥಳಗಳು ಮತ್ತು ಸೊತ್ತುಗಳ ಮೇಲೆ ಆಕ್ರಮಣ ನಡೆಸಿದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News