ಸ್ಮಿತ್‌ರನ್ನು ನಾಯಕತ್ವದಿಂದ ಕಿತ್ತುಹಾಕಿ: ಆಸ್ಟ್ರೇಲಿಯ ಸರಕಾರ ಸೂಚನೆ

Update: 2018-03-25 06:46 GMT

ಸಿಡ್ನಿ, ಮಾ.25: ಕೇಪ್‌ಟೌನ್ ಟೆಸ್ಟ್‌ನಲ್ಲಿ ಚೆಂಡು ವಿರೂಪಗೊಳಿಸಿದ್ದನ್ನು ಒಪ್ಪಿಕೊಂಡಿರುವ ಆಸ್ಟ್ರೇಲಿಯ ನಾಯಕ ಸ್ಟೀವ್ ಸ್ಮಿತ್‌ರನ್ನು ನಾಯಕತ್ವದಿಂದ ಕೂಡಲೇ ಕಿತ್ತುಹಾಕಬೇಕೆಂದು ಆಸ್ಟ್ರೇಲಿಯ ಸರಕಾರ ಕ್ರಿಕೆಟ್ ಆಸ್ಟ್ರೇಲಿಯಕ್ಕೆ(ಸಿಎ) ಸೂಚನೆ ನೀಡಿದೆ.

ಚೆಂಡು ವಿರೂಪಗೊಳಿಸಿರುವುದು ತಂಡದ ಮುಖಂಡರ ವಿಭಾಗದ ಉದ್ದೇಶಪೂರ್ವಕ ಯೋಜನೆಯಾಗಿತ್ತು ಎಂಬ ಸ್ಮಿತ್ ಹೇಳಿಕೆಯ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಕ್ಯಾಮರೂನ್ ಬ್ಯಾಂಕ್ರಾಫ್ಟ್ ಮೇಲೆ ಐಸಿಸಿ ದೂರನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಸಿಇಒ ಜೇಮ್ಸ್ ಸದರ್‌ಲ್ಯಾಂಡ್ ತಿಳಿಸಿದ ಒಂದು ಗಂಟೆ ಬಳಿಕ ಆಸ್ಟ್ರೇಲಿಯದ ಸರಕಾರ ಖಡಕ್ ಸೂಚನೆ ನೀಡಿದೆ. ಹೀಗಾಗಿ ಸ್ಮಿತ್ ನಾಯಕತ್ವದಿಂದ ಕೆಳಗಿಳಿಯುವ ಸಮಯ ಸನ್ನಿಹಿತವಾಗಿದೆ.

ಚೆಂಡು ವಿರೂಪಗೊಳಿಸಿದ ಘಟನೆ ‘‘ಆಘಾತಕಾರಿ ನಿರಾಶೆ’’ಎಂದು ಆಸ್ಟ್ರೇಲಿಯ ಪ್ರಧಾನಮಂತ್ರಿ ಮಾಲ್ಕಂ ಟರ್ನ್‌ಬಾಲ್ ಪ್ರತಿಕ್ರಿಯಿಸಿದ್ದಾರೆ.

‘‘ಆಸ್ಟ್ರೇಲಿಯ ಕ್ರೀಡಾ ಆಯೋಗ(ಎಎಸ್‌ಸಿ) ಕ್ರೀಡೆಯಲ್ಲಿ ಯಾವುದೇ ರೀತಿಯ ವಂಚನೆಯನ್ನು ಖಂಡಿಸುತ್ತದೆ. ಆಸ್ಟ್ರೇಲಿಯ ತಂಡಗಳು ಹಾಗೂ ಅಥ್ಲೀಟ್‌ಗಳು ನಮ್ಮ ದೇಶವನ್ನು ಪ್ರತಿನಿಧಿಸಲು ಅನಿರ್ದಿಷ್ಟ ಸಮಗ್ರತೆ ಪ್ರದರ್ಶಿಸುವ ಅಗತ್ಯವಿದೆ’’ಎಎಸ್‌ಸಿ ತಿಳಿಸಿದೆ.

ಆಸ್ಟ್ರೇಲಿಯ ನಾಯಕ ಸ್ಟೀವ್ ಸ್ಮಿತ್‌ರನ್ನು ಕ್ರಿಕೆಟ್ ಆಸ್ಟ್ರೇಲಿಯ ತಕ್ಷಣವೇ ನಾಯಕತ್ವದಿಂದ ಉಚ್ಚಾಟಿಸಬೇಕು. ಚೆಂಡು ವಿರೂಪಗೊಳಿಸುವ ಯೋಜನೆಯಲ್ಲಿ ಭಾಗಿಯಾಗಿದ್ದ, ಅದರ ಅರಿವಿದ್ದ ತಂಡ ಮುಖಂಡರ ಗುಂಪು ಹಾಗೂ ಕೋಚಿಂಗ್ ಸಿಬ್ಬಂದಿಗಳನ್ನೂ ಹುದ್ದೆಯಿಂದ ಕೆಳಗಿಳಿಸಬೇಕು. ಇದು ಹೇಗೆ ನಡೆಯಿತು ಎಂಬ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯ ಸಮಗ್ರ ತನಿಖೆ ನಡೆಸಬೇಕು ಆಸ್ಟ್ರೇಲಿಯ ಸರಕಾರ ಕ್ರಿಕೆಟ್ ಆಸ್ಟ್ರೇಲಿಯಕ್ಕೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News