ಬಿಳಿಯರ ಮುಂದೆ ನಗ್ನರಾಗುವ ನಮಗೆ ಸರಕಾರ ಹೆಸರು, ವಿಳಾಸ ಕೇಳಿದರೆ ಸಿಟ್ಟು ಬರುತ್ತದೆ

Update: 2018-03-25 10:05 GMT

ಹೊಸದಿಲ್ಲಿ, ಮಾ.25: "ನಾನು ಅಮೆರಿಕ ವೀಸಾಕ್ಕಾಗಿ 10 ಪುಟದ ಅರ್ಜಿ ಭರ್ತಿ ಮಾಡಿದ್ದೆ. ಬಿಳಿಯರ ಎದುರು ಬೆರಳಚ್ಚು ನೀಡಲು ಅಥವಾ ನಗ್ನರಾಗಲು ಕೂಡಾ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ನಮ್ಮದೇ ಸರ್ಕಾರ ನಮ್ಮ ಹೆಸರು ಮತ್ತು ವಿಳಾಸ ಕೇಳಿದರೂ, ನಮಗೆ ಸಿಟ್ಟು ಬರುತ್ತದೆ. ಅದು ಖಾಸಗಿತನದ ಉಲ್ಲಂಘನೆಯಾಗುತ್ತದೆ" ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಕೆ.ಜೆ.ಅಲ್ಭೋನ್ಸ್ ಹೇಳಿದ್ದಾರೆ.

ಆಧಾರ್ ಮಾಹಿತಿ ಸೋರಿಕೆ ಮತ್ತು ಫೇಸ್‍ಬುಕ್ ಮಾಹಿತಿಯನ್ನು ಅಮೆರಿಕ ಚುನಾವಣೆಗಾಗಿ ಬಳಸಿಕೊಂಡ ಕೇಂಬ್ರಿಜ್ ಅನಾಲಿಟಿಕಾ ವಿವಾದದ ಹಿನ್ನೆಲೆಯಲ್ಲಿ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಧಾರ್ ಟೀಕಾಕಾರನ್ನು ಗುರಿ ಮಾಡಿದ ಸಚಿವರು, ಆಧಾರ್ ಮಾಹಿತಿ ಸೋರಿಕೆ ವರದಿಗಳು ನಿರಾಧಾರ ಎಂದು ಅಭಿಪ್ರಾಯಪಟ್ಟರು.

ಆಧಾರ್ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಇವುಗಳ ವಿಚಾರಣೆ ಪೂರ್ಣಗೊಳ್ಳುವವರೆಗೂ, ಸರ್ಕಾರಿ ಸೇವೆಗಳಿಗೆ ಆಧಾರ್ ಸಂಪರ್ಕಿಸುವುದಕ್ಕೆ ನೀಡಿದ ಗಡುವನ್ನು ಅನಿರ್ದಿಷ್ಟಾವಧಿವರೆಗೆ ಸುಪ್ರೀಂಕೋರ್ಟ್ ವಿಸ್ತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

120 ಕೋಟಿಗೂ ಅಧಿಕ ಮಂದಿಯ ಬಯೋಮೆಟ್ರಿಕ್ ದಾಖಲೆಗಳನ್ನು ಈಗಾಗಲೇ ಸಂಗ್ರಹಿಸಲಾಗಿದ್ದು, ಇವುಗಳ ಸೋರಿಕೆ ಬಗೆಗಿನ ಆರೋಪಗಳ ಕುರಿತಂತೆ ಯುಐಡಿಎಐ ಹೋರಾಟ ನಡೆಸುತ್ತಿದೆ. ಆಧಾರ್ ಮಾಹಿತಿಯನ್ನು 2048 ಬಿಟ್ ಎನ್‍ಕ್ರಿಪ್ಷನ್‍ನಲ್ಲಿ ಸಂಗ್ರಹಿಸಲಾಗಿದ್ದು, ಇದನ್ನು ಉಲ್ಲಂಘಿಸಲು 13 ಶತಕೋಟಿ ವರ್ಷಗಳು ಬೇಕು ಎಂದು ಯುಐಡಿಎಐ ಮುಖ್ಯಸ್ಥ ಅಜಯ್‍ಭೂಷಣ್ ಪಾಂಡೆ ಸುಪ್ರೀಂಕೋರ್ಟ್‍ಗೆ ಕಳೆದ ವಾರ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News