ಸಿರಿಯ: ರಾಕೆಟ್ ದಾಳಿಗೆ ಕಿರಿಯ ಫುಟ್ಬಾಲ್ ಆಟಗಾರ ಬಲಿ

Update: 2018-03-25 17:13 GMT

ಡಮಾಸ್ಕಸ್,ಮಾ.25: ಸಿರಿಯದ ರಾಜಧಾನಿ ಡಮಾಸ್ಕಸ್‌ನ ಹೊರವಲಯದಲ್ಲಿ ಶಂಕಿತ ಬಂಡುಕೋರರ ರಾಕೆಟ್ ದಾಳಿಗೆ ಸಿರಿಯದ ಕಿರಿಯರ ಫುಟ್ಬಾಲ್ ತಂಡ ಆಟಗಾರನೊಬ್ಬ ಸಾವನ್ನಪ್ಪಿದ್ದು, ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆಂದು ಸರಕಾರಿ ಸುದ್ದಿಸಂಸ್ಥೆ ‘ಸಾನಾ’ ವರದಿ ಮಾಡಿದೆ.

ಡಮಾಸ್ಕಸ್‌ನ ಹೊರವಲಯದ ಮಾಝ್ರ ವಸತಿಪ್ರದೇಶದಲ್ಲಿರುವ ಸ್ಫೋರ್ಟ್ಸ್ ಕ್ಲಬ್‌ನ ಮೇಲೆ ಬಂಡುಕೋರರ ರಾಕೆಟ್ ಅಪ್ಪಳಿಸಿದೆಯೆಂದು ಸಾನಾ ತಿಳಿಸಿದೆ. ಇದೇ ಕಟ್ಟಡದಲ್ಲಿ ರಶ್ಯದ ರಾಯಭಾರಿ ಕಚೇರಿಯೂ ಇದ್ದು, ಅದನ್ನೇ ಗುರಿಯಾಗಿಸಿ ಬಂಡುಕೋರರು ರಾಕೆಟ್ ದಾಳಿ ನಡೆಸಿರಬಹುದೆಂದು ಸಾನಾ ತಿಳಿಸಿದೆ.

ರಾಕೆಟ್ ದಾಳಿಯಲ್ಲಿ ಮೃತಪಟ್ಟ ಕಿರಿಯ ಫುಟ್ಬಾಲ್ ಆಟಗಾರನನ್ನು 12 ವರ್ಷ ವಯಸ್ಸಿನ ಮೊಹಸೀನ್ ಅಬ್ಬಾಸ್ ಎಂಬುದಾಗಿ ಗುರುತಿಸಲಾಗಿದೆಯೆಂದು ಸಿರಿಯ ಸೇನೆಯ ಪುಟ್ಬಾಲ್ ತಂಡದ ಅಧ್ಯಕ್ಷ ಮೊಹ್ಸಿನ್ ಅಬ್ಬಾಸ್ ತಿಳಿಸಿದ್ದಾರೆ.

ಮೊಹಸೀನ್ ಸಿರಿಯ ಸೇನೆಯ ಫುಟ್ಬಾಲ್ ತಂಡದ ಯುವ ಲೀಗ್ ತಂಡದಲ್ಲಿದ್ದನು ಹಾಗೂ ಆತ ಅಲ್-ಫಯಾದಲ್ಲಿ ತರಬೇತಿ ಪಡೆಯುತ್ತಿದ್ದನೆಂದು ಅಬ್ಬಾಸ್ ಹೇಳಿದ್ದಾರೆ.

 ರಾಕೆಟ್ ದಾಳಿಯಲ್ಲಿ ಅಂಡರ್ 15 ತಂಡದ ಹಲವು ಫುಟ್ಬಾಲ್ ಆಟಗಾರರು ಗಾಯಗೊಂಡಿದ್ದು, ಅವರು ರಾಜಧಾನಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಸಾನಾ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News