ಉತ್ತರಾಖಂಡ ವಿಧಾನಸಭೆಯಲ್ಲಿ ಲೋಕಾಯುಕ್ತ ವಿಷಯಲ್ಲಿ ಗದ್ದಲ

Update: 2018-03-26 12:52 GMT

 ಗೈರಸೈಣ,ಮಾ.26: ಕಾಂಗ್ರೆಸ್ ಸೋಮವಾರ ಇಲ್ಲಿಯ ಉತ್ತರಾಖಂಡ ವಿಧಾನಸಭೆಯಲ್ಲಿ ಲೋಕಾಯುಕ್ತ ವಿಷಯವ ನ್ನೆತ್ತಿಕೊಂಡು ತೀವ್ರ ಪ್ರತಿಭಟನೆಯನ್ನು ನಡೆಸಿತು. ಲೋಕಾಯುಕ್ತವನ್ನು ರಚಿಸುವಲ್ಲಿ ರಾಜ್ಯ ಸರಕಾರದ ವೈಫಲ್ಯವು ಅದರ ಶೂನ್ಯ ಭ್ರಷ್ಟಾಚಾರ ಸಹಿಷ್ಣುತೆ ನೀತಿಯ ಅಣಕವಾಗಿದೆ ಎಂದು ಅದು ಕಿಡಿಕಾರಿತು.

ನಿಯಮ 310ರಡಿ ಲೋಕಾಯುಕ್ತ ವಿಷಯದಲ್ಲಿ ವಿವರವಾದ ಚರ್ಚೆ ನಡೆಯಬೇಕೆಂಬ ತಮ್ಮ ಬೇಡಿಕೆಯನ್ನು ಸ್ಪೀಕರ್ ತಿರಸ್ಕರಿಸಿದಾಗ ಕೋಲಾಹಲವನ್ನು ಸೃಷ್ಟಿಸಿದ ಕಾಂಗ್ರೆಸ್ ಸದಸ್ಯರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸದನದ ಅಂಗಳಕ್ಕೆ ಧಾವಿಸಿದರು ಮತ್ತು ಚರ್ಚೆಗೆ ಆಗ್ರಹಿಸಿದರು. ಇದರಿಂದಾಗಿ ಸ್ಪೀಕರ್ ತಲಾ ಅರ್ಧ ಗಂಟೆ ಕಾಲ ಎರಡು ಬಾರಿ ಕಲಾಪಗಳನ್ನು ಮುಂದೂಡಿದರು.

ಪ್ರತಿಪಕ್ಷ ನಾಯಕಿ ಇಂದಿರಾ ಹೃದಯೇಶ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಲೋಕಾಯುಕ್ತ ವಿಷಯದಲ್ಲಿ ಸದನದ ಹೊರಗೂ ಪ್ರತಿಭಟನೆಗಳನ್ನು ನಡೆಸಿದರು.

ಲೋಕಾಯುಕ್ತ ಮಸೂದೆಯ ಪರಿಶೀಲನೆಗಾಗಿ ರಚಿಸಲಾಗಿದ್ದ ಸದನ ಸಮಿತಿಯು ಈಗಾಗಲೇ ತನ್ನ ವರದಿಯನ್ನು ಸಲ್ಲಿಸಿದೆ. ಆದರೂ ಶಾಸನವನ್ನು ವಿಧಾನಸಭೆಯಲ್ಲಿ ಮಂಡಿಸಲಾಗುತ್ತಿಲ್ಲ. ಇದು ಭಾರೀ ಪ್ರಚಾರವನ್ನು ಪಡೆದುಕೊಂಡಿರುವ ರಾಜ್ಯ ಸರಕಾರದ ಶೂನ್ಯ ಸಹಿಷ್ಣುತೆ ನೀತಿಯ ಅಣಕವಾಗಿದೆ ಎಂದು ಇಂದಿರಾ ಟೀಕಿಸಿದರು.

 ಪ್ರತಿಪಕ್ಷ ಆರೋಪವನ್ನು ತಳ್ಳಿಹಾಕಿದ ಉನ್ನತ ಶಿಕ್ಷಣ ಸಚಿವ ಧನಸಿಂಗ್ ರಾವತ್ ಅವರು, ಲೋಕಾಯುಕ್ತ ಅಸ್ತಿತ್ವದಲ್ಲಿ ಇಲ್ಲದಿದ್ದರೂ ರಾಜ್ಯ ಸರಕಾರದ ಒಂದು ವರ್ಷದ ಆಡಳಿತವು ಸ್ವಚ್ಛ ಮತ್ತು ಭ್ರಷ್ಟಾಚಾರ ಮುಕ್ತವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News