ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಅವ್ಯವಹಾರ ಆರೋಪ: ಸಿಬಿಐ ತನಿಖೆಗೆ ಆಗ್ರಹ

Update: 2018-03-26 16:16 GMT

ಬೆಂಗಳೂರು,ಮಾ. 26: ಕೇಂದ್ರ ಸರಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದಲ್ಲಿ ಮೂರು ಹಂತದ ಯೋಜನೆಗಳ ಅನುಷ್ಠಾನದಲ್ಲಿ ಭಾರಿ ಅವ್ಯವಹಾರ ನಡೆದಿದ್ದು ತಕ್ಷಣವೇ ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಪ್ರಧಾನಮಂತ್ರಿ ಅವಾಜ್ ಯೋಜನೆಯಡಿ ಭಾರಿ ಅವ್ಯವಹಾರ ನಡೆದಿದ್ದುಮ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ವಿ. ದೇವರಾಜ್, ಹಿರಿಯ ಅಧಿಕಾರಿ ಕಪಿಲ್ ಮೋಹನ್ ಹಾಗೂ ಅಧಿಕಾರಿಗಳು 300 ಕೋಟಿ ರೂ.ಗೂ ಹೆಚ್ಚು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದರು.

ಹಗರಣಕ್ಕೆ ಸಂಬಂಧಪಟ್ಟ 277 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ಮೂರು ಹಂತದ ಯೋಜನೆಗಳಿಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒತ್ತಾಯಿಸಿದರು.

ರಾಜ್ಯದಲ್ಲಿ ಎಲ್ಲರಿಗೂ ಸೂರು ಒದಗಿಸುವ ಮೂರು ಹಂತದ ಯೋಜನೆಯ ಅನುಷ್ಠಾನಕ್ಕೆ ಕರ್ನಾಟಕ ಕೊಳೆಗೇರಿ ಅಭಿವದ್ಧಿ ಮಂಡಳಿ ಮೂಲಕ ಕೆ.ಟಿ.ಟಿ.ಪಿ ಕಾಯ್ದೆಗೆ ವಿರುದ್ಧವಾಗಿ ಅಲ್ಪಾವದಿ ಟೆಂಡರ್ ಕರೆಯಲಾಗಿದೆ. ಒಂದನೇ ಹಂತದಲ್ಲಿ 16,293 ಮನೆಗಳು ಎರಡನೇ ಹಂತದಲ್ಲಿ 43,368 ಮನೆಗಳನ್ನು ನಿರ್ಮಿಸಲು ಹಾಗೂ ಮೂರನೆ ಹಂತದಲ್ಲಿ ಎಂಬತ್ತೈದು ಪ್ಯಾಕೇಜ್‌ಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ ಎಂದು ಅವರು ದೂರಿದರು.

ಒಂದನೇ ಹಂತದ ಯೋಜನೆಗೆ 8,82,19,43 ರೂ. ವೆಚ್ಚ ಮಾಡಲಾಗಿದೆ. ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ 2,66,0842 ರೂ.ವೆಚ್ಚ ಮಾಡಲಾಗುತ್ತಿದೆ. ಈ ಹಂತದ ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಸರಕಾರದ ಪಾಲು 740 ಕೋಟಿ 52 ಲಕ್ಷ ರೂ. ಹಾಗೂ ರಾಜ್ಯ ಸರಕಾರದ ಅನುದಾನ 745ಕೋಟಿ 17ಲಕ್ಷ ರೂ. ಎಂದು ವಿವರಿಸಿದರು.

ಅವರು, ಟೆಂಡರ್ ಕರೆಯುವ ವಿಷಯದಲ್ಲಿ ವಸತಿ ಇಲಾಖೆ ಅಧಿಕಾರಿಗಳು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರ ನಡುವೆ ಕಮಿಷನ್ ಹಣ ಸಂಬಂಧ ಬಹಿರಂಗ ಕಿತ್ತಾಟ ನಡೆದಿತ್ತು. ಅಲ್ಲದೆ, ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಸತಿ ಸಚಿವ ಎಂ.ಕೃಷ್ಣಪ್ಪ ನಡುವೆ ರಾಜಿ ಸಂಧಾನ ನಡೆದು ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ ಕರೆಯಲಾಗಿದ್ದ ಮೊದಲನೇ ಟೆಂಡರ್ ರದ್ದುಗೊಳಿಸಲಾಯಿತು ಎಂದು ತಿಳಿಸಿದರು.

ಏಕಾಏಕಿ ಮೂರನೇ ಹಂತದ ಯೋಜನೆಗೆ ಎರಡನೇ ಬಾರಿ ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ಟೆಂಡರ್‌ಗಳಿಗೆ ಆತುರಾತುರವಾಗಿ ಅನುಮೋದನೆ ನೀಡಲಾಗಿದೆ. ಕೆಲ ಗುತ್ತಿಗೆದಾರರು ನಕಲಿ ಪ್ರಮಾಣ ಪತ್ರ ನೀಡಿ ಟೆಂಡರ್‌ನಲ್ಲಿ ಭಾಗವಹಿಸಿದ್ದಾರೆ. ಅಂಥವರನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಬೇಕೆಂದು ಎನ್.ಆರ್. ರಮೇಶ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News