ಡೇವಿಸ್ ಕಪ್: ಭಾಂಬ್ರಿ ಅಲಭ್ಯ

Update: 2018-03-26 19:03 GMT

ಹೊಸದಿಲ್ಲಿ, ಮಾ.26: ಭಾರತದ ಉನ್ನತ ರ್ಯಾಂಕಿನ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಚೀನಾ ವಿರುದ್ಧ ಡೇವಿಸ್ ಕಪ್ ಪಂದ್ಯದಿಂದ ಹೊರಗುಳಿದಿದ್ದಾರೆ.

ಆಯ್ಕೆ ಸಮಿತಿಯು ಭಾಂಬ್ರಿ ಬದಲಿಗೆ ಇನ್ನೋರ್ವ ವಿಶ್ವದ ನಂ.246ನೇ ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್‌ರನ್ನು ಆಯ್ಕೆ ಮಾಡಿದೆ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ನಡೆದ ವರ್ಲ್ಡ್ ಗ್ರೂಪ್ ಪ್ಲೇ-ಆಫ್‌ನಲ್ಲಿ ಆತಿಥೇಯ ಕೆನಡಾ ವಿರುದ್ಧ 2-3 ಅಂತರದಿಂದ ಸೋತಿರುವ ಭಾರತ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದು, ಇದೀಗ ಮತ್ತೊಮ್ಮೆ ವಿದೇಶಿ ನೆಲದಲ್ಲಿ ಆಡಲಿದೆ. ಎ.6-7 ರಂದು ನಡೆಯಲಿರುವ ಏಷ್ಯಾ/ಒಶಿಯಾನಿಯ ಗ್ರೂಪ್-1ರ ಎರಡನೇ ಸುತ್ತಿನಲ್ಲಿ ಚೀನಾವನ್ನು ಎದುರಿಸಲಿದೆ. ಪ್ರವಾಸಿ ಭಾರತ ತಂಡ ಚೀನಾ ವಿರುದ್ಧ ಈ ತನಕ ಆಡಿರುವ ಎಲ್ಲ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿದೆ. 2005ರಲ್ಲಿ ಕೊನೆಯ ಬಾರಿ ಆಡಿದೆ.

ಚೀನಾ ವಿರುದ್ಧ ಪಂದ್ಯದಲ್ಲಿ ರಾಮ್‌ಕುಮಾರ್ ರಾಮನಾಥನ್ ಹಾಗೂ ಸುಮಿತ್ ನಗಾಲ್ ಭಾರತವನ್ನು ಪ್ರತಿನಿಧಿಸುವ ಇತರ ಇಬ್ಬರು ಸಿಂಗಲ್ಸ್ ಆಟಗಾರರಾಗಿದ್ದಾರೆ. ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಭಾರತ 2014ರಿಂದ ನಾಲ್ಕು ಬಾರಿ ವಿಶ್ವ ಗ್ರೂಪ್‌ನಲ್ಲಿ ತೇರ್ಗೆಡೆಯಾಗಲು ಪ್ರಯತ್ನಿಸಿದೆ. ಆದರೆ, ಸರ್ಬಿಯ, ಝೆಕ್ ಗಣರಾಜ್ಯ, ಸ್ಪೇನ್ ಹಾಗೂ ಕೆನಡಾ ವಿರುದ್ಧ ಸೋತಿದೆ.

ಇದೀಗ 107ನೇ ರ್ಯಾಂಕಿನಲ್ಲಿರುವ ಭಾಂಬ್ರಿ ಇತ್ತೀಚೆಗೆ ಅಗ್ರ ರ್ಯಾಂಕಿನ ಆಟಗಾರರ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಗಾಯದ ಸಮಸ್ಯೆಯಿಂದಾಗಿ ಡೇವಿಸ್ ಕಪ್‌ನಿಂದ ಹೊರಗುಳಿಯುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News