ಸಚಿವರು, ಶಾಸಕರ ಪುತ್ರರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೆ ಅಂತಿಮ: ಟಿ.ಬಿ.ಜಯಚಂದ್ರ

Update: 2018-03-28 13:32 GMT

ಬೆಂಗಳೂರು, ಮಾ.28: ಸಚಿವರು ಹಾಗೂ ಶಾಸಕರ ಪುತ್ರರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನವೆ ಅಂತಿಮ. ಗೆಲ್ಲುವ ಸಾಮರ್ಥ್ಯವೇ ಟಿಕೆಟ್‌ಗಾಗಿ ಮಾನದಂಡವಾಗಿರಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಮೂಲಕ ಕೆಪಿಸಿಸಿಗೆ ಶಿಫಾರಸ್ಸು ಮಾಡಿದ್ದೇವೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಒಂದು ಕುಟುಂಬಕ್ಕೆ ಎರಡು ಟಿಕೆಟ್ ನೀಡಬಾರದೆಂದು ಯಾವುದೆ ನಿರ್ಧಾರವನ್ನು ಕೈಗೊಂಡಿಲ್ಲ. ಒಂದು ಕುಟುಂಬಕ್ಕೆ ಎರಡು ಟಿಕೆಟ್ ನೀಡುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆದರೆ, ಟಿಕೆಟ್ ಪಡೆಯಲು ಗೆಲ್ಲುವುದೊಂದೆ ಮಾನದಂಡವಾಗಬೇಕು ಎಂದು ಅವರು ಹೇಳಿದರು.

ಭೌಗೋಳಿಕವಾಗಿ ಬೆಳಗಾವಿ ಹೊರತುಪಡಿಸಿದರೆ ತುಮಕೂರು ಜಿಲ್ಲೆಯೆ ಅತ್ಯಂತ ದೊಡ್ಡ ಜಿಲ್ಲೆಯಾಗಿದೆ. 11 ವಿಧಾನಸಭಾ ಕ್ಷೇತ್ರಗಳನ್ನು ತುಮಕೂರು ಜಿಲ್ಲೆ ಹೊಂದಿದೆ. ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಮೂಲಕ ಶಿಫಾರಸ್ಸು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಬೀದರ್ ಜಿಲ್ಲೆ: ಬೀದರ್ ಜಿಲ್ಲೆಯ ಕ್ಷೇತ್ರಗಳ ಟಿಕೆಟ್ ಹಂಚಿಕೆ ವಿಚಾರದ ಕುರಿತು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ನಾವು ಎಲ್ಲರ ಹೆಸರುಗಳನ್ನು ಕೊಟ್ಟಿದ್ದೇವೆ. ಬಸವಕಲ್ಯಾಣದ ವೈಜನಾಥ್ ಕಾಂಶೆಟ್ಟಿ ಕಾಂಗ್ರೆಸ್ ಸೇರಿದ್ದಾರೆ. ಈ ಬಾರಿ ಆರು ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಚಿಂತಾಮಣಿಯಲ್ಲಿ ಮಾತ್ರ ಸಮಸ್ಯೆಯಿದೆ. ಸಂಸದ ಕೆ.ಎಚ್.ಮುನಿಯಪ್ಪ, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಈ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಅಪ್ಪ ಮಕ್ಕಳಿಗೆ ಟಿಕೆಟ್ ನೀಡುವುದು ಹೊಸದೇನಲ್ಲ. ಬೇರೆ ಪಕ್ಷಗಳಲ್ಲೂ ಇಂತಹ ಪರಿಸ್ಥಿತಿಯಿದೆ. ನಮ್ಮ ಮಕ್ಕಳು ಅನ್ನೋ ಒಂದೇ ಕಾರಣಕ್ಕೆ ನಾವು ಟಿಕೆಟ್ ಕೇಳುತ್ತಿಲ್ಲ. ಅರ್ಹತೆ ಇದ್ದರೆ ನಮ್ಮ ಮಕ್ಕಳಿಗೂ ಟಿಕೆಟ್ ಕೊಡಲಿ, ಜಯನಗರ ನನ್ನ ಹಳೆಯ ಕ್ಷೇತ್ರ, ನನ್ನ ಮಗಳು ಸೌಮ್ಯಾ ಅಲ್ಲಿಂದ ಟಿಕೆಟ್ ಕೇಳುತ್ತಿದ್ದಾಳೆ. ಕೊಟ್ಟರೆ ಸಂತೋಷ ಎಂದು ಅವರು ತಿಳಿಸಿದರು.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಆರು ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈಗಾಗಲೆ ನಾಲ್ಕು ಕ್ಷೇತ್ರಗಳಲ್ಲಿ ನಮ್ಮ ಶಾಸಕರಿದ್ದಾರೆ. ಉಳಿದ ಎರಡು ಕ್ಷೇತ್ರಗಳಿಗೂ ಒತ್ತು ನೀಡುವ ಕುರಿತು ಚರ್ಚೆ ನಡೆಸಲಾಗಿದೆ. ನಮ್ಮ ಸರಕಾರ ರಾಜ್ಯದ ಜನರ ಹಸಿವನ್ನು ನೀಗಿಸಿದೆ, ಹಲವು ಜನಪರ ಯೋಜನೆಗಳನ್ನು ನೀಡಿದೆ. ನಮ್ಮ ಪಕ್ಷಕ್ಕೆ ಜನ ಬಲವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಹೇಳಿದರು.

ಮಂಡ್ಯ: ನಾನು ಹಾಗೂ ನನ್ನ ಮಗ ಬಿಜೆಪಿ ಸೇರ್ಪಡೆಯಾಗುತ್ತಿದ್ದೇವೆ ಎಂಬ ವಿಚಾರ ಶುದ್ಧ ಸುಳ್ಳು. ಕಾಂಗ್ರೆಸ್ ಪಕ್ಷದಿಂದಲೆ ನಾವಿಬ್ಬರೂ ಚುನಾವಣೆಗೆ ಸ್ಪರ್ಧಿಸುತ್ತೇವೆ. ಯಾವ ಬಿಜೆಪಿ ನಾಯಕರು ನಮ್ಮನ್ನು ಸಂಪರ್ಕಿಸಿಲ್ಲ. ನಾವು ಬಿಜೆಪಿಗೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಏನು ತೊಂದರೆಯಾಗಿದೆ ಎಂದು ನಾನು ಬೇರೆ ಪಕ್ಷಗಳಿಗೆ ಹೋಗಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಹೇಳಿದರು.

ನಮ್ಮ ಸಂಬಂಧಿಕರು ಮೃತಪಟ್ಟಿದ್ದರಿಂದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ನೇತೃತ್ವದಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಸರಿಯಾಗಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.

ನನ್ನ ಮಗ ಸ್ಪರ್ಧಿಸುವುದಿಲ್ಲ: ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಕೇಳಿದ್ದೇನೆ. ಅರಸೀಕೆರೆ, ಚನ್ನರಾಯಪಟ್ಟಣ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್ ಶಾಸಕರು ಇಲ್ಲದ ಕಡೆ ಎರಡು ಹೆಸರುಗಳನ್ನು ಶಿಫಾರಸ್ಸು ಮಾಡಿದ್ದೇವೆ. ನನ್ನ ಮಗ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಯಲ್ಲ, ಆತ ಯಾವುದೆ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಸ್ಪಷ್ಟಣೆ ನೀಡಿದರು.

ನಾನು ಚುನಾವಣೆಯಲ್ಲಿ ಸ್ಪರ್ಧಿಸುವವರೆಗೆ ಮಗನಿಗೆ ಅವಕಾಶವಿಲ್ಲ. ನನಗೇನು ಇನ್ನೂ ವಯಸ್ಸಾಗಿಲ್ಲ. ಅರಕಲಗೂಡು ಕ್ಷೇತ್ರದಿಂದಲೆ ಸ್ಪರ್ಧಿಸುತ್ತೇನೆ. ನನ್ನ ಮಗನಿಗೆ ಟಿಕೆಟ್ ನೀಡುವಂತೆ ಯಾವುದೆ ಬೇಡಿಕೆಯಿಟ್ಟಿಲ್ಲ. ನಮ್ಮ ಜಿಲ್ಲೆಯ ಅಭ್ಯರ್ಥಿಗಳ ಬಗ್ಗೆ ಹೇಳಿದ್ದೇನೆ, ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವಂತೆ ತಿಳಿಸಿದ್ದೇನೆ ಎಂದು ಅವರು ಹೇಳಿದರು.

ಅರಸೀಕೆರೆ, ಚನ್ನರಾಯಪಟ್ಟಣದಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಇದರ ಬಗ್ಗೆಯೂ ಸಮಗ್ರ ಮಾಹಿತಿ ಕೊಟ್ಟಿದ್ದೇನೆ. ಕಾಂಗ್ರೆಸ್ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ತಲಾ ಇಬ್ಬರ ಹೆಸರನ್ನು ಹೇಳಿದ್ದೇನೆ. ಶ್ರವಣಬೆಳಗೊಳದಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಪುಟ್ಟೇಗೌಡ, ಶ್ರೀಕಂಠಯ್ಯನವರ ಮೊಮ್ಮಗ ಕೂಡ ಆಕಾಂಕ್ಷಿಗಳು. ಗೆಲ್ಲುವಂತಹವರ ಹೆಸರನ್ನೆ ಕೊಟ್ಟಿದ್ದೇನೆ. ಟಿಕೆಟ್ ಕೊಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಮಂಜು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News