×
Ad

ನಾನು ಯಡಿಯೂರಪ್ಪ ರಾಮ - ಲಕ್ಷ್ಮಣರಿದ್ದಂತೆ: ಕೆ.ಎಸ್.ಈಶ್ವರಪ್ಪ

Update: 2018-03-28 19:24 IST

ಶಿವಮೊಗ್ಗ, ಮಾ. 28: ಈ ಹಿಂದೆ ನಮ್ಮಲ್ಲಿ ಗೊಂದಲವಿದ್ದುದು ನಿಜ. ಪ್ರಸ್ತುತ ನಮ್ಮಲ್ಲಿ ಯಾವುದೇ ವೈಮನಸ್ಸಿಲ್ಲ. ನಾನು ಯಡಿಯೂರಪ್ಪ ರಾಮ - ಲಕ್ಷ್ಮಣರಿದ್ದಂತೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರುವುದೆ ನಮ್ಮ ಗುರಿಯಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಹಿಂದೆ ಗೊಂದಲ ಉಂಟಾಗಿದ್ದ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರು ಸಭೆ ನಡೆಸಿ ಅದನ್ನು ನಿವಾರಿಸಿದ್ದರು. ಇತ್ತೀಚೆಗೆ ಶಿವಮೊಗ್ಗ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಕೂಡ ರಾಷ್ಟ್ರೀಯ ಅಧ್ಯಕ್ಷರು ನಮ್ಮಿಬ್ಬರೊಂದಿಗೆ ಚರ್ಚೆ ನಡೆಸಿದ್ದಾರೆ. ನಮ್ಮಲ್ಲಿದ್ದ ಸಂದೇಹ ದೂರ ಮಾಡಿಕೊಂಡಿದ್ದಾರೆ. ನಮ್ಮಲ್ಲಿನ ಒಗ್ಗಟ್ಟು ಕಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ನಮ್ಮಿಬ್ಬರನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದರು.

ಕೆಲಸ ಮಾಡುತ್ತೆನೆ: ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದಿಂದ ಆಂತರಿಕ ಸಮೀಕ್ಷೆ ನಡೆಯುತ್ತಿದೆ. ಶಿವಮೊಗ್ಗ ಸೇರಿದಂತೆ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಸರ್ವೇ ಕಾರ್ಯ ಪೂರ್ಣಗೊಂಡ ನಂತರ ಗೆಲುವು ಸಾಧಿಸುವ ಅಭ್ಯರ್ಥಿಗಳಿಗೆ ವರಿಷ್ಟರು ಟಿಕೆಟ್ ನೀಡಲಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ತಾನು ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದಾರೆ. ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.

ವಾಗ್ದಾಳಿ: ಕಳೆದ ಚುನಾವಣೆ ಸಂದರ್ಭದಲ್ಲಿ ಹಲವು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ 'ಹಿಂದ' ವರ್ಗಕ್ಕೆ ದ್ರೋಹ ಎಸಗಿದೆ. ಕಳೆದ ನಾಲ್ಕೂವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸಮಾಜದಲ್ಲಿ ಗೊಂದಲ ಮೂಡಿಸುವ ಅನೇಕ ಪ್ರಯತ್ನ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹಿಂದು ವಿರೋಧಿ ನೀತಿಯನ್ನೆ ಅನುಸರಿಸಲಾಗಿದೆ. ಪ್ರಾರಂಭದಲ್ಲಿ ಉಡುಪಿ ಶ್ರೀಕೃಷ್ಣ ಮಠವನ್ನು ಸರ್ಕಾರದ ಸ್ವಾಧೀನಕ್ಕೆ ಪಡೆಯಲಾಗುವುದು ಎಂದು ಹೇಳಿದ್ದರು. ನಂತರ ವ್ಯಕ್ತವಾದ ವಿರೋಧದ ಹಿನ್ನೆಲೆಯಲ್ಲಿ, ಈ ನಿರ್ಧಾರದಿಂದ ಹಿಂದಕ್ಕೆ ಸರಿದರು. ಸಿಎಂ ಆಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಉಡುಪಿ ಶ್ರೀಕೃಷ್ಣನ ದರ್ಶನ ಪಡೆಯಲಿಲ್ಲ. ರಾಹುಲ್ ಗಾಂಧಿಗೂ ದರ್ಶನ ಪಡೆಯುವುದಕ್ಕೂ ಅವಕಾಶ ನೀಡಲಿಲ್ಲ. ಶ್ರೀಕೃಷ್ಣ ಮಠದಿಂದ ತಮಗೆ ಆಹ್ವಾನ ಬಂದಿಲ್ಲ. ಹೀಗಾಗಿ ಭೇಟಿ ನೀಡಿಲ್ಲ ಎಂದು ಹೇಳಿಕೆ ನೀಡುತ್ತಾರೆ. ಕೃಷ್ಣ ಮಠಕ್ಕೆ ಆಹ್ವಾನ ನೀಡಲು ಅಲ್ಲೇನು ಮದುವೆ ನಡೆಯುತ್ತಿದೆಯೇ? ರಾಜಕೀಯ ದೊಂಬರಾಟ, ನಾಟಕ ನಿಲ್ಲಿಸಬೇಕು ಎಂದರು.

ಸಮಾವೇಶ: ಏ.3 ರಂದು ಕಾಗಿನೆಲೆಯಲ್ಲಿ ಬೃಹತ್ ಹಿಂದ ವರ್ಗಗಳ ಸಮಾವೇಶ ನಡೆಸಲಾಗುತ್ತಿದೆ. ಸುಮಾರು 3 ರಿಂದ 5 ಲಕ್ಷ ಸೇರುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳಲಿದ್ಧಾರೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News