×
Ad

ವಿ.ಶಂಕರ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಹೈಕೋರ್ಟ್

Update: 2018-03-28 19:54 IST

ಬೆಂಗಳೂರು, ಮಾ.27: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆರೋಪ ನಿಗದಿಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿ.ಶಂಕರ್ ಹಾಗೂ ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಡಿ.ಆರ್.ಮಂಜುನಾಥ್ ವಿರುದ್ಧದ ನ್ಯಾಯಾಂಗ ನಿಂದನೆಯನ್ನು ಹೈಕೋರ್ಟ್ ಬಿಟ್ಟಿದೆ.

ಈ ಕುರಿತಂತೆ ಹೆಸರಘಟ್ಟ ಹೋಬಳಿಯ ರಾಜಾನುಕುಂಟೆ ನರಸಿಂಹಯ್ಯ ಎಂಬುವರು ಸೇರಿ ನಾಲ್ವರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಮತ್ತು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳ ವಿರುದ್ಧದ ನ್ಯಾಯಾಂಗ ನಿಂದನೆಯನ್ನು ಬುಧವಾರ ಕೈಬಿಟ್ಟಿತು.

ಪ್ರತಿವಾದಿಗಳ ಪರ ವಾದಿಸಿದ ಸರಕಾರಿ ವಕೀಲರು, ರಾಜಾನುಕುಂಟೆ ನರಸಿಂಹಯ್ಯ ಅವರ ಜಮೀನಿನ ನೋಂದಣಿಯನ್ನು ಈಗಾಗಲೇ ಮಾಡಲಾಗಿದೆ ಎಂದು ಪೀಠಕ್ಕೆ ಜ್ಞಾಪನಾ ಪತ್ರ(ಮೆಮೊ) ಸಲ್ಲಿಸಿದರು.

ನರಸಿಂಹಯ್ಯ ಎಂಬುವರ ಜಮೀನಿನ ನೋಂದಣಿ ಮಾಡಿಕೊಡುವಂತೆ ಹೈಕೋರ್ಟ್ ನೀಡಿದ್ದ ಆದೇಶ ಜಾರಿಗೊಳಿಸಿಲ್ಲ ಎಂಬ ಆರೋಪದಡಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿ.ಶಂಕರ್ ಹಾಗೂ ಉತ್ತರ ತಾಲೂಕು ತಹಶೀಲ್ದಾರ್ ಡಿ.ಆರ್.ಮಂಜುನಾಥ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗಿತ್ತು. ಅಲ್ಲದೆ, ಮಂಗಳವಾರ ನ್ಯಾಯಪೀಠವು ವಿ.ಶಂಕರ್ ಹಾಗೂ ಡಿ.ಆರ್.ಮಂಜುನಾಥ್‌ಗೆ ಖುದ್ದು ಹಾಜರಾಗಲು ಸೂಚನೆ ನೀಡಿತ್ತು. ಹೀಗಾಗಿ, ವಿ.ಶಂಕರ್ ಬದಲಾಗಿ ಸದ್ಯ ಬೆಂಗಳೂರು ನಗರ ಡಿಸಿಯಾಗಿರುವ ಕೆ.ಎ.ದಯಾನಂದ ಹಾಗೂ ಡಿ.ಆರ್.ಮಂಜುನಾಥ್ ಅವರು ನ್ಯಾಯಪೀಠಕ್ಕೆ ಖುದ್ದು ಹಾಜರಾಗಿದ್ದರು.

ಸರಕಾರಿ ವಕೀಲರು ಸಲ್ಲಿಸಿದ ಮೆಮೊ ಸ್ವೀಕರಿಸಿದ ನ್ಯಾಯಪೀಠವು ಡಿಸಿ, ತಹಶೀಲ್ದಾರ್ ವಿರುದ್ಧದ ನ್ಯಾಯಾಂಗ ನಿಂದನೆಯನ್ನು ಕೈಬಿಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News