×
Ad

ಅಲೆಯನ್ಸ್ ವಿವಿ ವಿವಾದ: ಕೆಳ ನ್ಯಾಯಾಲಯದ ಆದೇಶ ರದ್ದುಕೋರಿ ಮಧುಕರ್ ಅಂಗೂರ್ ಸಲ್ಲಿಸಿದ್ದ ಅರ್ಜಿ ವಜಾ

Update: 2018-03-28 21:08 IST

ಬೆಂಗಳೂರು, ಮಾ.28: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ನಲ್ಲಿರುವ ಅಲೆಯನ್ಸ್ ವಿಶ್ವವಿದ್ಯಾನಿಲಯ ಪ್ರವೇಶಕ್ಕೆ ನಿರ್ಬಂಧ ಹೇರಿ ನಗರ ಸಿವಿಲ್ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ವಿವಿಯ ಮಾಜಿ ಕುಲಪತಿ ಮಧುಕರ್ ಅಂಗೂರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ವಿವಿ ಪ್ರವೇಶ ನಿರ್ಬಂಧಿಸಿ 2017ರ ಅ.21ರಂದು ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಮಧುಕರ್ ಅಂಗೂರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ, ಅಧೀನ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದ್ದು, ಮಧುಕರ್ ಅಂಗೂರ್ ಅರ್ಜಿಗಳನ್ನು ವಜಾಗೊಳಿಸಿತು.

ಅಲೆಯನ್ಸ್ ವಿವಿ ಕುಲಪತಿ, ಆಡಳಿತ ವಿಚಾರ ಮತ್ತು ಷೇರುಗಳ ವಿಚಾರವಾಗಿ ಮಧುಕರ್ ಅಂಗೂರ್ ಮತ್ತವರ ಕುಟುಂಬ ಸದಸ್ಯರಾದ ಸುಧೀರ್ ಅಂಗೂರ್, ಶೈಲಾ ಚೆಬ್ಬಿ ಗೋವಿಂದ್, ಅಭಯ್ ಗೋವಿಂದ ಚೆಬ್ಬಿ, ಮಾಲಾ ಮಡಿಕೇರಿ, ಪ್ರಕಾಶ್ ಸಿದ್ದಪ್ಪ ನಡುವೆ ವಿವಾದ ಏರ್ಪಟ್ಟಿತ್ತು. ಈ ಸಂಬಂಧ ಮಧುಕರ್ ಅಂಗೂರ್ ನಗರ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಮತ್ತೊಂದೆಡೆ ವಿವಿ ಆಡಳಿತ ಮಂಡಳಿಯೂ ಅರ್ಜಿ ಸಲ್ಲಿಸಿ, ಮಧುಕರ್ ಅಂಗೂರ್ ವಿವಿ ಪ್ರವೇಶಿಸದಂತೆ ನಿರ್ಬಂಧ ಹೇರುವಂತೆ ಕೋರಿತ್ತು.

ಅರ್ಜಿ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ವಿವಿ ಆವರಣ ಪ್ರವೇಶಿಸದಂತೆ ಮಧುಕರ್ ಅಂಗೂರ್‌ಗೆ ನಿರ್ಬಂಧ ಹೇರಿತ್ತು. ಇದನ್ನು ಪ್ರಶ್ನಿಸಿ ಮಧುಕರ್ ಅಂಗೂರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News