ನವ ಕರ್ನಾಟಕದ ಕಲ್ಪನೆಯಲ್ಲಿ ಪ್ರಣಾಳಿಕೆ ಸಿದ್ಧ: ವೀರಪ್ಪಮೊಯ್ಲಿ
ಬೆಂಗಳೂರು, ಮಾ.28: ನವ ಕರ್ನಾಟಕ ನಿರ್ಮಾಣದ ಆಲೋಚನೆ ಮೇರೆಗೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಿದ್ಧವಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಎಂ.ವೀರಪ್ಪಮೊಯ್ಲಿ ಹೇಳಿದ್ದಾರೆ.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಣಾಳಿಕೆ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪ್ರಣಾಳಿಕೆ ಯಾವ ರೀತಿಯಲ್ಲಿರಬೇಕು ಎಂಬುದರ ಕುರಿತು ಇಂದಿನ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ರವಿವಾರ ಇದಕ್ಕೆ ಅಂತಿಮ ಸ್ವರೂಪ ಸಿಗಲಿದೆ. ಪ್ರಾದೇಶಿಕ, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಮೂರು ವಿಭಾಗಗಳಾಗಿ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ರಾಜ್ಯಮಟ್ಟದ ಪ್ರಣಾಳಿಕೆ ಬಿಡುಗಡೆ ಸಮಾರಂಭವು ಬೆಂಗಳೂರಿನಲ್ಲಿ ನಡೆಯಲಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಕಳೆದ ಬಾರಿ 165 ಭರವಸೆಗಳನ್ನು ನೀಡಲಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ಅಂಶಗಳು ಪ್ರಣಾಳಿಕೆಯಲ್ಲಿರಲಿವೆ ಎಂದು ವೀರಪ್ಪಮೊಯ್ಲಿ ತಿಳಿಸಿದರು.
ಚುನಾವಣಾ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ್‌ಗುಂಡೂರಾವ್, ಎಸ್.ಆರ್.ಪಾಟೀಲ್, ಹಿರಿಯ ಸಚಿವರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.