ಸರಣಿ ಗೆಲುವಿನತ್ತ ದ.ಆಫ್ರಿಕ ಚಿತ್ತ

Update: 2018-03-29 19:00 GMT

ಜೋಹಾನ್ಸ್‌ಬರ್ಗ್, ಮಾ.30: ಕೇಪ್‌ಟೌನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಚೆಂಡು ವಿರೂಪ ಪ್ರಕರಣದಿಂದ ವಿಶ್ವದ ಗಮನ ಸೆಳೆದ ಕಾರಣ ಶುಕ್ರವಾರ ಇಲ್ಲಿ ಆರಂಭವಾಗಲಿರುವ 4 ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಸ್ಟ್ರೇಲಿಯಕ್ಕೆ ಅತ್ಯಂತ ಮುಖ್ಯವಾಗಿದೆ.

4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ದಕ್ಷಿಣ ಆಫ್ರಿಕ ಸ್ವದೇಶದಲ್ಲಿ 1970ರ ಬಳಿಕ ಆಸ್ಟ್ರೇಲಿಯ ವಿರುದ್ಧ 3-1 ಅಂತರದಿಂದ ಸರಣಿ ವಶಪಡಿಸಿಕೊಂಡು ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿದೆ.ಮತ್ತೊಂದಡೆ ಆಸ್ಟ್ರೇಲಿಯಕ್ಕೆ 2-2 ರಿಂದ ಸರಣಿ ಸಮಬಲಗೊಳಿಸುವ ಅವಕಾಶವೂ ಇದೆ. ಸರಣಿ ಆರಂಭಕ್ಕೆ ಮೊದಲೇ ವಿದಾಯ ಹೇಳುವುದಾಗಿ ಘೋಷಿಸಿರುವ ತಂಡದ ಪ್ರಮುಖ ವೇಗದ ಬೌಲರ್ ಮೊರ್ನೆ ಮೊರ್ಕೆಲ್‌ಗೆ ಗೆಲುವಿನ ಉಡುಗೊರೆ ನೀಡಲು ಆಫ್ರಿಕ ಬಯಸಿದೆ. ಕೇಪ್‌ಟೌನ್ ಟೆಸ್ಟ್‌ನಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದು ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಮೊರ್ಕೆಲ್ ಟೆಸ್ಟ್‌ನಲ್ಲಿ 300 ವಿಕೆಟ್ ಪೂರೈಸಿದ ದಕ್ಷಿಣ ಆಫ್ರಿಕದ ಐದನೇ ಬೌಲರ್ ಎನಿಸಿಕೊಂಡಿದ್ದರು. 85 ಟೆಸ್ಟ್ ಪಂದ್ಯಗಳನ್ನು ಆಡಿರುವ ಮೊರ್ಕೆಲ್ ಕೇಪ್‌ಟೌನ್ ಟೆಸ್ಟ್‌ನಲ್ಲಿ ಮೂರನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಆದರೆ, ಮೊರ್ಕೆಲ್ ಪ್ರದರ್ಶನವು ಚೆಂಡು ವಿರೂಪ ಪ್ರಕರಣದಿಂದಾಗಿ ಹೆಚ್ಚು ಸುದ್ದಿಯಾಗಲಿಲ್ಲ. ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬೌಲರ್ ಆಗಿರುವ ಮೊರ್ಕೆಲ್ 10 ವರ್ಷಕ್ಕೂ ಅಧಿಕ ಸಮಯ ದಕ್ಷಿಣ ಆಫ್ರಿಕ ತಂಡದ ಪರ ಆಡಿದ್ದರು. ಹೀಗಾಗಿ ಅವರ ಬೀಳ್ಕೊಡುಗೆ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಚೆಂಡು ವಿರೂಪ ಪ್ರಕರಣದಲ್ಲಿ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದು, ಸ್ಮಿತ್ ಅನುಪಸ್ಥಿತಿಯಲ್ಲಿ ವಿಕೆಟ್‌ಕೀಪರ್ ಟಿಮ್ ಪೈನ್ ಆಸ್ಟ್ರೇಲಿಯ ತಂಡದ 46ನೇ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಕೋಚ್ ಡರೆನ್ ಲೆಹ್ಮನ್ ಜೋಹಾನ್ಸ್ ಬರ್ಗ್ ಟೆಸ್ಟ್ ಬಳಿಕ ತನ್ನ ಹುದ್ದೆ ತೊರೆಯುವುದಾಗಿ ಘೋಷಿಸಿದ್ದಾರೆ.

ಆಸೀಸ್ 2011ರಲ್ಲಿ ಸ್ಮಿತ್ ಹಾಗೂ ವಾರ್ನರ್ ಅನುಪಸ್ಥಿತಿಯಲ್ಲಿ ಜೋಹಾನ್ಸ್ ಬರ್ಗ್ ಟೆಸ್ಟ್ ಆಡಿತ್ತು. ಬಿಲ್ಲಿ ಮುರ್ಡೊಚ್, ಜಾಕ್ ಬ್ಲಾಕ್ಯಾಮ್, ಬಾರ್ರಿ ಜರ್ಮನ್ ಹಾಗೂ ಆಡಮ್ ಗಿಲ್‌ಕ್ರಿಸ್ಟ್ ಬಳಿಕ ಆಸ್ಟ್ರೇಲಿಯದ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿರುವ ಆಸ್ಟ್ರೇಲಿಯದ 5ನೇ ವಿಕೆಟ್‌ಕೀಪರ್ ಟಿಮ್ ಪೈನ್. ಆಸ್ಟ್ರೇಲಿಯ ನಾಯಕತ್ವ ಪಡೆದಿರುವ ಪೈನ್‌ಗೆ ಕಠಿಣ ಸವಾಲು ಎದುರಾಗಿದೆ. ಈ ಹಿಂದೆ ವಾರ್ನರ್‌ಗೆ ಆರಂಭಿಕ ಜೊತೆಗಾರರಾಗಿದ್ದ ಜೋ ಬರ್ನ್ಸ್ ಹಾಗೂ ಮ್ಯಾಟ್ ರೆನ್‌ಶಾ ಅವರು ವಾರ್ನರ್ ಹಾಗೂ ಬ್ಯಾಂಕ್ರಾಫ್ಟ್ ಬದಲಿಗೆ ಆಡಲಿದ್ದಾರೆ. ಆಸ್ಟ್ರೇಲಿಯದ ವೇಗದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್ ಹಾಗೂ ಪ್ಯಾಟ್ ಕಮ್ಮಿನ್ಸ್ ರಿವರ್ಸ್ ಸ್ವಿಂಗ್ ಪಡೆಯಲಿದ್ದಾರೆಯೇ ಎಂದು ನಾಳೆ ಗೊತ್ತಾಗಲಿದೆ.

ಪಂದ್ಯದ ಸಮಯ: ಮಧ್ಯಾಹ್ನ 1:30 ಗಂಟೆಗೆ(ಭಾರತದ ಕಾಲಮಾನ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News