ಸೂಪರ್‌ಕಿಂಗ್ಸ್ ತಂಡಕ್ಕೆ ಮರಳುವ ಬಗ್ಗೆ ಭಾವುಕರಾದ ಧೋನಿ

Update: 2018-03-30 19:05 GMT

 ಹೊಸದಿಲ್ಲಿ, ಮಾ.30: ಭಾರತೀಯ ಕ್ರಿಕೆಟ್‌ರಂಗದಲ್ಲಿ ಅತೀಹೆಚ್ಚು ಜನರ ಪ್ರೀತಿಪಾತ್ರರಾಗಿರುವ ಆಟಗಾರರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಬಹಳ ವಿರಳ. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮತ್ತೆ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಮುನ್ನಡೆಸುವ ವಿಷಯ ಪ್ರಸ್ತಾಪಿಸಿದಾಗ ಧೋನಿ ಭಾವುಕರಾದ ಘಟನೆ ನಡೆದಿದೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಎರಡು ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದ ಸೂಪರ್‌ಕಿಂಗ್ಸ್ ತಂಡ ಐಪಿಎಲ್‌ನ ಹನ್ನೊಂದನೇ ಆವೃತ್ತಿಯಲ್ಲಿ ಮತ್ತೆ ಕಣಕ್ಕಿಳಿದಿದೆ. ಈ ಬಾರಿಯೂ ಸಿಎಸ್‌ಕೆ ತಂಡವನ್ನು ಧೋನಿ ಮುನ್ನಡೆಸಲಿದ್ದಾರೆ. ಚೆನ್ನೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಸ್‌ಕೆ ಬಗ್ಗೆ ಮಾತನಾಡುವ ವೇಳೆ ಧೋನಿ ಭಾವುಕರಾದ ವೀಡಿಯೊ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಾನು ಎಂಟು ವರ್ಷಗಳ ಕಾಲ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದೇನೆ. ಹಾಗಾಗಿ ತಂಡದ ಹಳದಿ ಸಮವಸ್ತ್ರವನ್ನು ಧರಿಸದಿರುವುದು ಬಹಳ ನೋವು ನೀಡಿದೆ ಎಂದು ಧೋನಿ ತಿಳಿಸಿದ್ದಾರೆ. ಆದರೆ ನಾವು ವೃತ್ತಿಪರ ಆಟಗಾರರರು ಯಾವುದೇ ತಂಡದ ಆಟವಾಡಿದರೂ ಜಯ ಗಳಿಸುವುದೇ ನಮ್ಮ ಗುರಿಯಾಗಿರುತ್ತದೆ. ಚೆನ್ನೈ ತಂಡಕ್ಕೆ ಯಾವ ಮಟ್ಟಕ್ಕೆ ಶ್ರಮಪಟ್ಟಿದ್ದೇನೋ ಪುಣೆ ತಂಡಕ್ಕೂ ಅಷ್ಟೇ ಶ್ರಮ ಹಾಕಿದ್ದೇನೆ ಎಂದು ಅವರು ವಿವರಿಸಿದ್ದಾರೆ. ಎಪ್ರಿಲ್ 7ರಂದು ವಾಂಖೆಡೆ ಮೈದಾನದಲ್ಲಿ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News