ವಿವಾದಿತ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ: 6 ವಾರಗಳಲ್ಲಿ ತೆರವುಗೊಳಿಸಲು ಹೈಕೋರ್ಟ್ ಆದೇಶ
ಬೆಂಗಳೂರು, ಮಾ.31: ಪುಲಕೇಶಿನಗರದ ವಿವಾದಿತ ಜಾಗದಲ್ಲಿ ನ್ಯಾಯಾಲಯಕ್ಕೆ ನೀಡಿದ್ದ ಮುಚ್ಚಳಿಕೆ ಉಲ್ಲಂಘಿಸಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಆರು ವಾರಗಳಲ್ಲಿ ತೆರವುಗೊಳಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ಆದೇಶ ನೀಡಿದೆ.
ಆಸ್ತಿ ಒಡೆತನಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಬಾಕಿ ಇರುವ ಹಿನ್ನೆಲೆಯಲ್ಲಿ ಆ ಜಾಗದಲ್ಲಿ ಕಟ್ಟಡ ನಿರ್ಮಿಸುವುದಿಲ್ಲ ಎಂದು ಬಿಬಿಎಂಪಿಯೇ ಹಿಂದೆ ಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿತ್ತು. ಹೀಗಿದ್ದರೂ ಅದೇ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿತ್ತು. ಹಾಗಾಗಿ ಇದೀಗ ನ್ಯಾ. ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ಪೀಠ ಆರು ವಾರಗಳಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಆದೇಶಿಸಿದೆ.
ಪುಲಕೇಶಿ ನಗರದ ಆ ವಿವಾದಾತ್ಮಕ ಜಾಗದ ಬಗ್ಗೆ ಬಿಬಿಎಂಪಿ ಮತ್ತು ನವೋದಯ ಗೃಹ ನಿರ್ಮಣ ಸಹಕಾರ ಸಂಘ ನಿಯಮಿತದ ನಡುವೆ ಕಾನೂನು ಸಮರ ನಡೆಯುತ್ತಿದೆ. ಅಧೀನ ನ್ಯಾಯಾಲಯ ಪಾಲಿಕೆ ಪರ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಸಂಘ, ಹೈಕೋರ್ಟ್ ಮೊರೆ ಹೋಗಿತ್ತು.
ಆಗ 2011ರಲ್ಲಿ ಹೈಕೋರ್ಟ್, ವಿವಾದಿತ ಜಾಗದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ನೀಡಿತ್ತು. ಈ ಮಧ್ಯೆ 2017ರ ಆಗಸ್ಟ್ 10ರಂದು ವಿವಾದಿತ ಜಾಗದಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸುವುದಿಲ್ಲ ಎಂದು ಪಾಲಿಕೆಯು ಮುಚ್ಚಳಿಕೆಯನ್ನು ನೀಡಿತ್ತು.
ಆದರೆ ಕಳೆದ ಡಿಸೆಂಬರ್‌ನಲ್ಲಿ ಹೈಕೋರ್ಟ್ ಚಳಿಗಾಲದ ರಜೆ ಇದ್ದ ಅವಧಿಯಲ್ಲಿ ಬಿಬಿಎಂಪಿ ನ್ಯಾಯಾಲಯದ ಆದೇಶ ಹಾಗೂ ತಾನು ನೀಡಿದ್ದ ಮುಚ್ಚಳಿಕೆ ಮರೆತು ಇಂದಿರಾ ಕ್ಯಾಂಟೀನ್ ನಿರ್ಮಿಸಿತ್ತು.