ಆರ್‌ಟಿಇ ಕಾಯ್ದೆಯಡಿ 30ಸಾವಿರ ಹೆಚ್ಚುವರಿ ಸೀಟು?
ಬೆಂಗಳೂರು, ಮಾ30: ಕಡ್ಡಾಯ ಶಿಕ್ಷಣ ಕಾಯ್ದೆ(ಆರ್.ಟಿ.ಇ)ಯಡಿ ಶಿಕ್ಷಣ ಪಡೆಯಲು ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 30ಸಾವಿರಗಳಷ್ಟು ಹೆಚ್ಚುವರಿ ಸೀಟುಗಳು ಸಿಗಬಹುದೆಂದು ಅಂದಾಜಿಸಲಾಗಿದೆ.
ಕಡ್ಡಾಯ ಶಿಕ್ಷಣ ಕಾಯ್ದೆ (ಆರ್.ಟಿ.ಇ)ಯಡಿ ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ 2.5 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1.58ಲಕ್ಷ ಮಕ್ಕಳಿಗೆ ಕಾಯ್ದೆಯಡಿ ಶಿಕ್ಷಣ ಪಡೆಯುವ ಅವಕಾಶ ಸಿಗಲಿದೆ. ಇನ್ನು, ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಹಾಗೂ ಮೀಸಲಾತಿ ಅನುಸಾರ ಸೀಟುಗಳನ್ನು ನೀಡಬೇಕಾಗಿರುವುದರಿಂದ ಮಕ್ಕಳಿಂದ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ರಾಜ್ಯದಲ್ಲಿರುವ ಪ್ರತಿಯೊಂದು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ.20ರಷ್ಟು ಸೀಟುಗಳನ್ನು ಆರ್.ಟಿ.ಇ ಕಾಯ್ದೆಯಡಿ ನೀಡಬೇಕಿದೆ. ರಾಜ್ಯ ಸರಕಾರದ ನಿಯಮಾನುಸಾರ ಈಗಾಗಲೇ 1.58ಲಕ್ಷ ಸೀಟುಗಳನ್ನು ಆರ್.ಟಿ.ಇ ಅಡಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದರೂ ಸಹ 2.28ಲಕ್ಷ ಅರ್ಜಿಗಳು ಸಲ್ಲಿಕೆಯಾಗಿರುವುದರಿಂದ ತಮ್ಮ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳು ಸಿಗುತ್ತದೆಯೇ ಎಂಬುದರ ಬಗ್ಗೆ ಪೋಷಕರು ಆತಂಕಗೊಂಡಿದ್ದಾರೆ.
ನಕಲಿ ಅರ್ಜಿಗಳಿಗೆ ಬ್ರೇಕ್: ಅರ್ಹ ಫಲಾನುಭವಿಗಳಿಗೆ ಆರ್‌ಟಿಇ ಸೌಲಭ್ಯ ದೊರಕಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಈ ಬಾರಿ ವಿದ್ಯಾರ್ಥಿ ಅಥವಾ ಪೋಷಕರ ಆಧಾರ್ ಸಂಖ್ಯೆ ಜೊತೆಗೆ ಜಾತಿ ಹಾಗೂ ಆದಾಯ ಸರ್ಟಿಫಿಕೇಟ್ ಪರಿಶೀಲಿಸಿ ಸೀಟು ನೀಡಲಾಗುತ್ತದೆ. ಹೀಗಾಗಿ, ನಕಲಿ ಅರ್ಜಿಗಳು ತಿರಸ್ಕೃತಗೊಳ್ಳಲಿವೆ.