ಪೆರೋಲ್ ಅವಧಿ ಮುಗಿಯುವ ಮುನ್ನವೇ ಪರಪ್ಪನ ಅಗ್ರಹಾರ ಸೇರಿದ ಶಶಿಕಲಾ
ಬೆಂಗಳೂರು, ಮಾ.31: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ತಮ್ಮ ಪೆರೋಲ್ ಅವಧಿ ಮುಗಿಯುವ ಮುನ್ನವೇ ಪರಪ್ಪನ ಅಗ್ರಹಾರಕ್ಕೆ ವಾಪಸಾಗಿದ್ದಾರೆ.
ಪತಿ ನಟರಾಜನ್ ಸಾವಿನ ನಂತರ ಅಂತ್ಯ ಸಂಸ್ಕಾರಕ್ಕೆಂದು ಶಶಿಕಲಾ 15 ದಿನಗಳ ಕಾಲ ತುರ್ತು ಪೆರೋಲ್ ಪಡೆದಿದ್ದರು. ಆದರೆ, ಪೆರೋಲ್ ಅವಧಿ ಮುಗಿಯುವ ನಾಲ್ಕು ದಿನ ಮೊದಲೇ ಶಶಿಕಲಾ ತಮಿಳುನಾಡಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ.
ಇದೇ ತಿಂಗಳ 20ರಂದು 15 ದಿನಗಳ ತುರ್ತು ಪೆರೋಲ್ ಅನ್ನು ಶಶಿಕಲಾಗೆ ನೀಡಲಾಗಿತ್ತು. ಎಪ್ರಿಲ್ 3ರ ವರೆಗೂ ಶಶಿಕಲಾಗೆ ಪೆರೋಲ್ ಇದ್ದರೂ ಮಾ.31ರಂದೆ ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ಬಂದಿದ್ದಾರೆ. ಬೆಳಗ್ಗೆ ಒಂಭತ್ತು ಗಂಟೆ ವೇಳೆಗೆ ಚೆನ್ನೈನ ತಮ್ಮ ನಿವಾಸದಿಂದ ಹೊರಟಿದ್ದ ಶಶಿಕಲಾ ಸಂಜೆ ವೇಳೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ತಲುಪಿದರು.
ಪತಿ ನಟರಾಜನ್ ಮೃತರಾದ ನಂತರ ಶಶಿಕಲಾ ಮನೆಯಲ್ಲಿ ಆಸ್ತಿ ಕಲಹ ಆರಂಭವಾಗಿದ್ದು ಆಸ್ತಿ ಹಂಚಿಕೆ ಮಾಡುವಂತೆ ಸಂಬಂಧಿಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದ ಬೇಸರಗೊಂಡಿರುವ ಶಶಿಕಲಾ ಪೆರೋಲ್ ಅವಧಿ ಇದ್ದರೂ ಸ್ವಯಂಪ್ರೇರಿತವಾಗಿ ಜೈಲಿಗೆ ಬಂದಿದ್ದಾರೆ ಎನ್ನಲಾಗಿದೆ.