ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಯಂತ್ರ ಮಾನವ!
ಬೆಂಗಳೂರು, ಮಾ.31: ರಾಜ್ಯದ ಪ್ರವಾಸಿ ತಾಣಗಳು ಮತ್ತು ವಿಮಾನ ನಿಲ್ದಾಣಗಳ ಬಗ್ಗೆ ಮಾಹಿತಿ ನೀಡಲು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ‘ಕೆಂಪ’ ಎಂಬ ಹೆಸರಿನ ಮಾತನಾಡುವ ಯಂತ್ರಮಾನವ (ರೊಬೋಟ್) ಆಗಮಿಸಲಿದ್ದಾನೆ. ಹೀಗಾಗಿ, ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರು ರೊಬೋಟ್ ಜೊತೆ ಮಾತುಕತೆ ನಡೆಸಿ ಮಾಹಿತಿ ಪಡೆಯಬಹುದಾಗಿದೆ.
ಮನುಷ್ಯರ ಮಾತಿಗೆ ಸ್ಪಂದಿಸಿ ಉತ್ತರಿಸುವ ಯಂತ್ರಮಾನವ (ರೋಬೋಟ್) ಜರ್ಮನಿಯ ಮ್ಯುನಿಚ್ ವಿಮಾನ ನಿಲ್ದಾಣ ಸೇರಿ ಹಲವು ರಾಷ್ಟ್ರಗಳ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ಸ್ಥಳದ ಬಗ್ಗೆ ಮಾಹಿತಿ ನೀಡಲು ‘ಹ್ಯೂಮನಾಯ್ಡ್’ ಎಂಬ ಹೆಸರಿನಲ್ಲಿ ರೋಬೋಟ್‌ಗಳನ್ನು ಈಗಾಗಲೇ ಪರಿಚಯಿಸಿವೆ. ಅದೇ ಮಾದರಿಯ ರೋಬೋಟ್ ಇದೀಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕಾಲಿಟ್ಟಿದೆ.
ನೂತನವಾಗಿ ಅಭಿವೃದ್ಧಿಪಡಿಸಲಾದ ರೋಬೋಟ್‌ಗೆ ಮುಖ ಹಾಗೂ ಧ್ವನಿ ಗ್ರಹಿಸುವ ಸಾಮರ್ಥ್ಯವಿದ್ದು, ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ನೀಡಲಿದೆ. ಇದರಿಂದ ಹೊಸ ಪ್ರಯಾಣಿಕರು ವಿಮಾನ ನಿಲ್ದಾಣ ಬಗ್ಗೆ ಸುಲಭವಾಗಿ ಮಾಹಿತಿ ಪಡೆಯಬಹುದಾಗಿದೆ.
ಬೆಂಗಳೂರು ಮೂಲದ ಸಿರೇನಾ ಟೆಕ್ನಾಲಜಿಸ್ ಸ್ಟಾರ್ಟಪ್ ಕಂಪನಿ ‘ಕೆಂಪ’ ರೋಬೋಟ್ ಅಭಿವೃದ್ಧಿಪಡಿಸಿದೆ. ಈ ರೊಬೋಟ್‌ನ ಬಳಕೆ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು, ರಾಜ್ಯ ಪ್ರವಾಸೋದ್ಯಮ ಇಲಾಖೆ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.