ಪ್ರತ್ಯೇಕ ಕಳವು ಪ್ರಕರಣ: 49 ಆರೋಪಿಗಳ ಬಂಧನ, 1.69 ಕೋಟಿ ರೂ.ಸೊತ್ತು ವಶ
ಬೆಂಗಳೂರು, ಮಾ. 31: ಐಸಿಐಸಿಐ ಬ್ಯಾಂಕಿನ ಎಟಿಎಂ ಕೇಂದ್ರಗಳಿಗೆ ಹಾಕಬೇಕಿದ್ದ 52ಲಕ್ಷ ರೂ.ಹಣವನ್ನು ಕದ್ದು ದನದ ಕೊಟ್ಟಿಗೆಯಲ್ಲಿ ಬಚ್ಚಿಟ್ಟಿದ್ದ ಪ್ರಕರಣ ಸೇರಿದಂತೆ 30ಕ್ಕೂ ಹೆಚ್ಚು ಪ್ರತ್ಯೇಕ ಪ್ರಕರಣಗಳಲ್ಲಿ 49 ಆರೋಪಿಗಳನ್ನು ಬಂಧಿಸಿರುವ ವೈಟ್‌ಫೀಲ್ಡ್ ವಿಭಾಗದ ಪೊಲೀಸರು, 1.60ಕೋಟಿ ರೂ.ಮೊತ್ತದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶನಿವಾರ ಇಲ್ಲಿನ ಕಾಡುಗೋಡಿ ಪೊಲೀಸ್ ಠಾಣಾ ಆವರಣದಲ್ಲಿ ಏರ್ಪಡಿಸಿದ್ದ ಕಳುವಾದ ವಸ್ತುಗಳನ್ನು ಮಾಲಕರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಮಾ.9ರಂದು ಐಸಿಐಸಿಐ ಬ್ಯಾಂಕಿನ 52ಲಕ್ಷ ರೂಗಳನ್ನು ಕಳವು ಮಾಡಿ ಹಣವನ್ನು ದನದ ಕೊಟ್ಟಿಗೆಯಲ್ಲಿ ಬಚ್ಚಿಟ್ಟಿದ್ದ ಸೆಕ್ಯೂರಿಟಿ ಸಂಸ್ಥೆ ಆರೋಪಿ ಪರಮೇಶ್(22)ನನ್ನು ಬಂಧಿಸಿ, 51.50 ಲಕ್ಷ ರೂ.ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರ ನೀಡಿದರು.
ಮಾರತ್‌ಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ತುಳಿಸಿ ರೋಡ್ ಬಳಿಯಿರುವ ಐಸಿಐಸಿಐ ಬ್ಯಾಂಕಿಗೆ ಸೇರಿದ 2 ಎಟಿಎಂಗಳಿಗೆ ಹಣ ತುಂಬಲು ತೆರಳಿದ ಆರೋಪಿ ಪರಮೇಶಿ, ಹಣವನ್ನು ದೋಚಿ ಕಂಪ್ಯೂಟರ್‌ನಲ್ಲಿ ತುಂಬಿದ್ದೇನೆ ಎಂದು ತೋರಿಸಿದ್ದ. ಆ ಬಳಿಕ ತನ್ನ ಸ್ವಂತ ಊರು ಮಡಿಕೇರಿಯ ಸೋಮವಾರಪೇಟೆಯ ದನದ ಕೊಟ್ಟಿಗೆಯಲ್ಲಿ ಹಣವನ್ನು ಬಚ್ಚಿಟ್ಟಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದರು.
ಏಳು ಮಂದಿ ಸೆರೆ: ದ್ವಿಚಕ್ರ ವಾಹನ ಕಳವು ಆರೋಪದ ಮೇಲೆ ಮಾರತ್ತಹಳ್ಳಿ, ಬೆಳ್ಳಂದೂರು, ಎಚ್‌ಎಎಲ್, ವರ್ತೂರು ಠಾಣಾ ಪೊಲೀಸರು 22 ಪ್ರತ್ಯೇಕ ಪ್ರಕರಣಗಳಲ್ಲಿ 7ಆರೋಪಿಗಳನ್ನು ಬಂಧಿಸಿ 49 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ವೈಟ್‌ಫೀಲ್ಡ್ ವಿಭಾಗದ ಮಾರತ್‌ಹಳ್ಳಿ, ಮಹದೇವಪುರ, ಎಚ್‌ಎಎಲ್, ವರ್ತೂರು ಸೇರಿದಂತೆ ಹಲವು ಠಾಣೆಗಳಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು, ಸರಗಳವು, ಮನೆಗಳವು ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ 42 ಆರೋಪಿಗಳನ್ನು ಬಂಧಿಸಿದ್ದು, 140 ಬೈಕ್, 200 ಗಾಂ ಚಿನ್ನಾಭರಣ, ಲ್ಯಾಪ್‌ಟಾಪ್, ಮೊಬೈಲ್ ಫೋನ್, 1ಕಾರು, ಟೆಂಪೋ ಸೇರಿ 1.60ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಭದ್ರತೆಗೆ ಸೂಚನೆ: ಎಟಿಎಂ ಕೇಂದ್ರಗಳ ಕಾವಲಿಗೆ ಸೂಕ್ತ ಸಿಬ್ಬಂದಿ ನೇಮಿಸದೆ ಸಾರ್ವಜನಿಕರ ಹಣಕ್ಕೆ ಭದ್ರತೆ ಒದಗಿಸದೆ ನಿರ್ಲಕ್ಷ್ಯವಹಿಸುವ ಭದ್ರತಾ ಏಜನ್ಸಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದ ಸುನೀಲ್‌ಕುಮಾರ್, ಎಟಿಎಂ ಕೇಂದ್ರದಲ್ಲಿನ ಹಣ ಕಳವು ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೊಲೀಸರ ಕಾರ್ಯ ಶ್ಲಾಘನೀಯ: ‘ಕೆಟ್ಟ ಗಳಿಕೆಯಲ್ಲಿ ನಮ್ಮ ತಂದೆ- ತಾಯಿಯನ್ನು (ಮೊಮ್ಮಗ) ನನ್ನ ಪುತ್ರನೇ ಹತ್ಯೆಗೈದಿದ್ದು, ಇಂತಹ ದುಷ್ಕೃತ್ಯವನ್ನು ಊಹಿಸಿರಲಿಲ್ಲ. ತನ್ನ ಸ್ನೇಹಿತರ ಜತೆ ಸೇರಿ ಕೃತ್ಯ ನಡೆಸಿ ಆಭರಣ ದೋಚಿದ್ದ. ಆ ಪ್ರಕರಣ ಭೇದಿಸಿ ಪತ್ತೆ ಮಾಡಿರುವ ಪೊಲೀಸರ ಕಾರ್ಯ ಶ್ಲಾಘನೀಯ. ಕಳುವಾದ ಆಭರಣ ಸಿಕ್ಕ ಸಂತೋಷ. ಆದರೆ, ತಂದೆ-ತಾಯಿಯನ್ನು ಕಳೆದುಕೊಂಡಿರುವುದು ನೋವು ತಂದಿದೆ’ ಎಂದು ಕೊಲೆಯಾದ ವೃದ್ಧ ದಂಪತಿಯ ಪುತ್ರಿ ಹೇಮಾ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್, ಮಾರತ್ತಹಳ್ಳಿ ಉಪ ವಿಭಾಗದ ಎಸಿಪಿ ಶಿವಕಮಾರ್, ವೈಟ್‌ಫೀಲ್ಡ್ ಉಪ ವಿಭಾಗದ ಎಸಿಪಿ ವಾಸು, ಇನ್ಸ್‌ಪೆಕ್ಟರ್‌ಗಳಾದ ಚನ್ನೇಶ್, ವಿಕ್ಟರ್ ಸೈಮನ್, ರಾಮಚಂದ್ರ, ಮೆಹಬೂಬ್‌ಸಾಬ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.