ಅರುಣ್ ಜೇಟ್ಲಿ ಕ್ಷಮೆಯಾಚಿಸಿದ ಕೇಜ್ರಿವಾಲ್

Update: 2018-04-02 09:45 GMT

  ಹೊಸದಿಲ್ಲಿ,ಎ.2: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕ್ಷಮೆಯಾಚನೆಯ ಸರದಿ ಮುಂದುವರಿದಿದೆ. ಇದೀಗ ಅವರು ಕೇಂದ್ರ ವಿತ್ತ ಸಚಿವ ಹಾಗೂ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಬಳಿ ಕ್ಷಮೆಯಾಚಿಸಿದ್ದಾರೆ. ಜೇಟ್ಲಿ ಅವರು ಕೇಜ್ರಿವಾಲ್ ಹಾಗೂ ಅವರ ಪಕ್ಷದ ಶಾಸಕರ ವಿರುದ್ದ 10 ಕೋ.ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಕೇಜ್ರಿವಾಲ್ ಜೊತೆಗೆ ಆಮ್ ಆದ್ಮಿ ಪಕ್ಷ(ಎಎಪಿ)ದ ಶಾಸಕರಾದ ಸಂಜಯ ಸಿಂಗ್, ರಾಘವ್ ಚಡ್ಡಾ ಹಾಗೂ ಅಶುತೋಷ್ ಕೂಡ ಬಿಜೆಪಿ ನಾಯಕನಿಗೆ ಜಂಟಿ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ.

ಜೇಟ್ಲಿ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳಲಾಗಿಲ್ಲ. ಕೇಜ್ರಿವಾಲ್ ಹಾಗೂ ಇತರ ಮೂವರು ಎಎಪಿ ಮುಖಂಡರ ಕ್ಷಮಾದಾನವನ್ನು ಆಧರಿಸಿ ತೀರ್ಪು ನೀಡಬೇಕೆಂದು ಜಂಟಿ ಅರ್ಜಿ ಸಲ್ಲಿಸಲಾಗಿದೆ.

ಜೇಟ್ಲಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂದು ಕೇಜ್ರಿವಾಲ್ ಹಾಗೂ ಇತರ ಐವರು ಎಎಪಿ ಮುಖಂಡರುಗಳಾದ ರಾಘವ್, ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ಅಶುತೋಷ್ ಹಾಗೂ ದೀಪಕ್ ಬಾಜ್‌ಪೇಯಿ ಆರೋಪಿಸಿದ್ದರು. ಜೇಟ್ಲಿ ಅವರು ಕೇಜ್ರಿವಾಲ್ ಹಾಗೂ ಇತರ ಐವರು ಎಎಪಿ ಮುಖಂಡರ ವಿರುದ್ಧ 10 ಕೋ.ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು.

 ‘‘ನಾನು ಮಾಡಿರುವ ಆರೋಪಗಳು ಡಿಡಿಸಿಎ ವ್ಯವಹಾರ ಬಗ್ಗೆ ಮೊದಲ ಒಳನೋಟ ಹೊಂದಿರುವ ಪ್ರತಿನಿಧಿ ನನಗೆ ಒದಗಿಸಿರುವ ಮಾಹಿತಿ ಹಾಗೂ ಪೇಪರ್‌ಗಳನ್ನು ಆಧರಿಸಿವೆ. ಮಾಹಿತಿ ಹಾಗೂ ಅದರಲ್ಲಿರುವ ಆಪಾದನೆಗಳು ಆಧಾರರಹಿತ ಎನ್ನುವುದನ್ನು ನಾನು ಇತ್ತೀಚೆಗೆ ಕಂಡುಕೊಂಡಿದ್ದೇನೆ. ತಪ್ಪು ಮಾಹಿತಿಯಿಂದ ಇಂತಹ ಆರೋಪ ಮಾಡಿರುವುದು ನನಗೆ ಸ್ಪಷ್ಟವಾಗಿದೆ’’ ಎಂದು ಜೇಟ್ಲಿಗೆ ಬರೆದಿರುವ ಕ್ಷಮೆ ಪತ್ರದಲ್ಲಿ ಕೇಜ್ರಿವಾಲ್ ಹಾಗೂ ಅವರ ಸಂಗಡಿಗರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News