ಚೊಚ್ಚಲ ಶತಕ ವಂಚಿತ ಬಾಬರ್: ಪಾಕ್‌ಗೆ ಟ್ವೆಂಟಿ-20 ಸರಣಿ

Update: 2018-04-03 07:27 GMT

  ಕರಾಚಿ, ಎ.3: ಎರಡನೇ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ವೆಸ್ಟ್‌ಇಂಡೀಸ್‌ನ್ನು 82 ರನ್‌ಗಳಿಂದ ಮಣಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಸರ್ಫರಾಝ್ ಅಹ್ಮದ್ ನಾಯಕತ್ವದಲ್ಲಿ ಸತತ ಏಳನೇ ಟ್ವೆಂಟಿ-20 ಸರಣಿ ಗೆದ್ದುಕೊಂಡಿತು.

 ಇಲ್ಲಿನ ನ್ಯಾಶನಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ 2ನೇ ಟ್ವೆಂಟಿ-20 ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಬಾಬರ್ ಸಾಹಸದಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ ದಾಖಲಿಸಿತು. ಆರಂಭಿಕ ಆಟಗಾರ ಬಾಬರ್ ಆಝಂ(ಔಟಾಗದೆ 97) ಕೇವಲ 3 ರನ್‌ನಿಂದ ಚೊಚ್ಚಲ ಟ್ವೆಂಟಿ-20 ಶತಕ ವಂಚಿತರಾದರು. ಬಾಬರ್ ತನ್ನ 58 ಎಸೆತಗಳ ಇನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದಾರೆ. ಬಾಬರ್ ಇನ್ನು 3 ರನ್ ಗಳಿಸಿದ್ದರೆ ಟ್ವೆಂಟಿ-20ಯಲ್ಲಿ ಶತಕ ಸಿಡಿಸಿದ ಪಾಕ್‌ನ 2ನೇ ದಾಂಡಿಗ ಎನಿಸಿಕೊಳ್ಳುತ್ತಿದ್ದರು. 2014ರಲ್ಲಿ ಅಹ್ಮದ್ ಶೆಹಝಾದ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಪಾಕ್‌ನ ಮೊದಲ ದಾಂಡಿಗ ಎನಿಸಿಕೊಂಡಿದ್ದರು. ಬಾಂಗ್ಲಾದೇಶ ವಿರುದ್ಧ ಶೆಹಝಾದ್ ಶತಕ ಸಿಡಿಸಿದ್ದರು.

ಗೆಲ್ಲಲು 206 ರನ್ ಗುರಿ ಪಡೆದಿದ್ದ ವಿಂಡೀಸ್ ತಂಡ ಪಾಕ್‌ ವೇಗದ ಬೌಲರ್ ಮುಹಮ್ಮದ್ ಆಮಿರ್(3-22), ಶಾದಾಬ್(2-23) ಹಾಗೂ ಹುಸೈನ್ ತಲತ್(2-12)ದಾಳಿಗೆ ತತ್ತರಿಸಿ 19.2 ಓವರ್‌ಗಳಲ್ಲಿ 123 ರನ್‌ಗೆ ಆಲೌಟಾಯಿತು. ಮೊದಲ ಪಂದ್ಯದಲ್ಲಿ ಕೇವಲ 60 ರನ್‌ಗೆ ಆಲೌಟಾಗಿ 143 ರನ್‌ಗಳಿಂದ ಸೋತಿದ್ದ ವಿಂಡೀಸ್ ಎರಡನೇ ಪಂದ್ಯದಲ್ಲಿ ಸ್ವಲ್ಪ ಸುಧಾರಿತ ಪ್ರದರ್ಶನ ನೀಡಿತು. ಉಭಯ ತಂಡಗಳು ಕರಾಚಿಯಲ್ಲಿ ಮಂಗಳವಾರ 3ನೇ ಹಾಗೂ ಅಂತಿಮ ಪಂದ್ಯ ಆಡಲಿವೆ.

ವಿಂಡೀಸ್ ಪರ ಚಾಂಡ್ವಿಕ್ ವಾಲ್ಟನ್ ಒಂದಷ್ಟು ಪ್ರತಿರೋಧ ತೋರಿದರು. 29 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ಸಹಿತ 40 ರನ್ ಗಳಿಸಿದರು. ಹಿರಿಯ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್(12) ಅವರೊಂದಿಗೆ 2ನೇ ವಿಕೆಟ್‌ಗೆ 39 ರನ್ ಜೊತೆಯಾಟ ನಡೆಸಿದರು. ಈ ಇಬ್ಬರು ಆಟಗಾರರನ್ನು ಶಾದಾಬ್ ಪೆವಿಲಿಯನ್‌ಗೆ ಕಳುಹಿಸಿದರು. ತಲತ್ ವಿಂಡೀಸ್‌ನ ಕೆಳ ಕ್ರಮಾಂಕದ ಆಟಗಾರರಿಗೆ ಸವಾಲಾದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಸತತ 4ನೇ ಬಾರಿ 180ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿತು. ತಲತ್(63, 41 ಎಸೆತ) ಅವರೊಂದಿಗೆ 2ನೇ ವಿಕೆಟ್‌ಗೆ 119 ರನ್ ಗಳಿಸಿದ ಆರಂಭಿಕ ಆಟಗಾರ ಬಾಬರ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಪಾಕ್ ತಂಡ ಇನಿಂಗ್ಸ್‌ನ ಕೊನೆಯ 5 ಓವರ್‌ಗಳಲ್ಲಿ 61 ರನ್ ಗಳಿಸಿತು. ಶುಐಬ್ ಮಲಿಕ್ 7 ಎಸೆತಗಳಲ್ಲಿ 2 ಬೌಂಡರಿ,1 ಸಿಕ್ಸರ್ ಸಹಿತ ಔಟಾಗದೆ 17 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News