ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿದ ಕಿವೀಸ್

Update: 2018-04-03 18:47 GMT

ಕ್ರೈಸ್ಟ್‌ಚರ್ಚ್, ಎ.3: ಬಾಲಂಗೋಚಿ ಐಶ್ ಸೋಧಿ ಅವರ ಹೋರಾಟಕಾರಿ ಅರ್ಧಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸಿದೆ. ಈ ಮೂಲಕ 1999ರ ಬಳಿಕ ಆಂಗ್ಲರ ವಿರುದ್ಧ ಮೊದಲ ಬಾರಿ ಟೆಸ್ಟ್ ಸರಣಿ ಗೆದ್ದುಕೊಂಡಿದೆ.

ಆಕ್ಲೆಂಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 49 ರನ್‌ಗಳಿಂದ ಜಯ ಸಾಧಿಸಿದ್ದ ನ್ಯೂಝಿಲೆಂಡ್ ಅಂತಿಮ ದಿನವಾದ ಮಂಗಳವಾರ ಮಂದ ಬೆಳಕಿನಿಂದಾಗಿ ಅಂಪೈರ್‌ಗಳು ಪಂದ್ಯ ಕೊನೆಗೊಳಿಸಿದಾಗ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು. ಕೊನೆಗೂ ಡ್ರಾ ಸಾಧಿಸಿದ ಕಿವೀಸ್ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿತು.

  ಭಾರತ ಮೂಲದ ಸೋಧಿ ಔಟಾಗದೆ 56 ರನ್(168 ಎಸೆತ, 9 ಬೌಂಡರಿ)ಗಳಿಸಿ ಇಂಗ್ಲೆಂಡ್‌ನ ಗೆಲುವಿನ ಕನಸು ಭಗ್ನಗೊಳಿಸಿದರು. ಕಿವೀಸ್ ಇಂದು ವಿಕೆಟ್ ನಷ್ಟವಿಲ್ಲದೆ 42 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಸ್ಟುವರ್ಟ್ ಬ್ರಾಡ್ ಸತತ ಎಸೆತಗಳಲ್ಲಿ ರಾವಲ್(17) ಹಾಗೂ ನಾಯಕ ವಿಲಿಯಮ್ಸನ್(0) ವಿಕೆಟ್ ಕಬಳಿಸಿ ಎದುರಾಳಿ ತಂಡಕ್ಕೆ ಭಯ ಹುಟ್ಟಿಸಿದರು. ರಾಸ್ ಟೇಲರ್(13) ಬ್ರಾಡ್‌ಗೆ ಹ್ಯಾಟ್ರಿಕ್ ವಿಕೆಟ್ ನಿರಾಕರಿಸಿದರು.

     13 ರನ್ ಗಳಿಸಿದ ಹೆನ್ರಿ ನಿಕೊಲ್ಸ್ ಅವರು ಜೇಮ್ಸ್ ಆ್ಯಂಡರ್ಸನ್‌ಗೆ 531ನೇ ಬಲಿ ಎನಿಸಿಕೊಂಡರು. ಮತ್ತೊಂದೆಡೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ಆರಂಭಿಕ ಆಟಗಾರ ಟಾಮ್ ಲಥಾಮ್(83) ಹಾಗೂ ಸ್ಪಿನ್ನರ್ ಸೋಧಿ ಇಂಗ್ಲೆಂಡ್ ಬೌಲರ್‌ಗಳಿಗೆ ನಿರಾಸೆವುಂಟು ಮಾಡಿದರು. ಕಾಲಿನ್ ಡಿ ಗ್ರಾಂಡ್‌ಹೋಮ್(45) ಅವರೊಂದಿಗೆ 7ನೇ ವಿಕೆಟ್‌ಗೆ 47 ರನ್ ಜೊತೆಯಾಟ ನಡೆಸಿದ ಸೋಧಿ ತಂಡವನ್ನು ಡ್ರಾನತ್ತ ಮುನ್ನಡೆಸಿದರು. ನೀಲ್ ವಾಗ್ನರ್ ಹಾಗೂ ಸೋಧಿ 8ನೇ ವಿಕೆಟ್‌ಗೆ 37 ರನ್ ಜೊತೆಯಾಟ ನಡೆಸಿದರು. ಈ ಇಬ್ಬರು 31 ಓವರ್‌ಗಳ ಕಾಲ ಇಂಗ್ಲೆಂಡ್ ಬೌಲಿಂಗ್‌ನ್ನು ದಿಟ್ಟವಾಗಿ ಎದುರಿಸಿದರು. ಇಂಗ್ಲೆಂಡ್ ಪರ ಬ್ರಾಡ್(2-72), ವುಡ್(2-45) ಹಾಗೂ ಲೀಚ್(2-61)ತಲಾ ಎರಡು ವಿಕೆಟ್ ಪಡೆದಿದ್ದಾರೆ. ಕಿವೀಸ್ ಬೌಲರ್‌ಗಳಾದ ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ಕ್ರಮವಾಗಿ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್

►ಇಂಗ್ಲೆಂಡ್ ಮೊದಲ ಇನಿಂಗ್ಸ್:307 ರನ್‌ಗೆ ಆಲೌಟ್

►ನ್ಯೂಝಿಲೆಂಡ್ ಮೊದಲ ಇನಿಂಗ್ಸ್: 278/10

►ಇಂಗ್ಲೆಂಡ್ ಎರಡನೇ ಇನಿಂಗ್ಸ್: 352/9

►ನ್ಯೂಝಿಲೆಂಡ್ ಎರಡನೇ ಇನಿಂಗ್ಸ್: 256/8

(ಟಾಮ್ ಲಥಾಮ್ 83, ಸೋಧಿ ಔಟಾಗದೆ 56, ಗ್ರಾಂಡ್ ಹೋಮ್ 45, ಬ್ರಾಡ್ 2-72, ವುಡ್ 2-45, ಲೀಚ್ 2-61)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News