ಹೊಟ್ಟೆನೋವಿನ ರೋಗಿಗೆ ಡಯಾಲಿಸಿಸ್ ಪ್ರಕ್ರಿಯೆ ನಡೆಸಿದ ಏಮ್ಸ್ ವೈದ್ಯ!

Update: 2018-04-04 15:22 GMT

ಹೊಸದಿಲ್ಲಿ, ಎ.4: ಆಘಾತಕಾರಿ ಘಟನೆಯೊಂದರಲ್ಲಿ ಹಿರಿಯ ವೈದ್ಯರೊಬ್ಬರು ಹೊಟ್ಟೆನೋವಿನ ಸಮಸ್ಯೆ ಹೊಂದಿದ್ದ ಮಹಿಳೆಯ ಮೇಲೆ ಡಯಾಲಿಸಿಸ್‌ಗೆ ಚಿಕಿತ್ಸೆಗೆ ನಡೆಸಬೇಕಾದ ಪ್ರಕ್ರಿಯೆಯನ್ನು ನಡೆಸಿ ನಂತರ ತನ್ನ ತಪ್ಪನ್ನು ಮರೆಮಾಚಲು ದಾಖಲೆಗಳನ್ನೇ ತಿದ್ದಿದ ಘಟನೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಯಲ್ಲಿ ನಡೆದಿದೆ.

ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯ ಶಸ್ತ್ರಚಿಕಿತ್ಸೆ ವಿಭಾಗದ ಸಹಾಯಕ ಉಪನ್ಯಾಸಕರಾಗಿರುವ ವೈದ್ಯರು ನಡೆಸಿರುವ ಈ ಪ್ರಮಾದದ ತನಿಖೆ ನಡೆಸಲು ಸಂಸ್ಥೆಯ ನಿರ್ದೇಶಕರ ಸೂಚನೆಯಂತೆ ಡೀನ್ ಡಾ. ವೈ.ಕೆ ಗುಪ್ತಾ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ತನ್ನ ಊರಿನ ಆಸ್ಪತ್ರೆಯಲ್ಲಿ ನಡೆಸಲಾದ ಹೊಟ್ಟೆಯ ಶಸ್ತ್ರಚಿಕಿತ್ಸೆಯಲ್ಲಿ ನೋವು ಕಾಣಿಸಿಕೊಂಡ ಕಾರಣ ಬಿಹಾರದ ಸಹರ್ಸ ಗ್ರಾಮದ 30ರ ಹರೆಯದ ರೇಖಾ ದೇವಿ ಎಐಐಎಂಎಸ್‌ಗೆ ತಪಾಸಣೆಗೆ ಆಗಮಿಸಿದ್ದರು. ಫೆಬ್ರವರಿ 7ರಂದು ಆಕೆಗೆ ಸ್ವಲ್ಪ ಪ್ರಮಾಣದ ಅರಿವಳಿಕೆ ಮದ್ದು ನೀಡಿ ಶಸ್ತ್ರಚಿಕಿತ್ಸಾ ಕೊಠಡಿಗೆ ಸಾಗಿಸಲಾಗಿತ್ತು. ಅಲ್ಲಿ ಹಿರಿಯ ವೈದ್ಯರು ಆಕೆಗೆ ಕಿಡ್ನಿ ಸಂಬಂಧಿ ಕಾಯಿಲೆಗೆ ನೀಡಲಾಗುವ ಡಯಾಲಿಸಿಸ್ ಚಿಕಿತ್ಸೆಗೆ ಮಾಡಲಾಗುವ ಪ್ರಕ್ರಿಯೆಯನ್ನು ಮಾಡಿದ್ದರು ಎಂದು ಸ್ಥಳದಲ್ಲಿದ್ದ ನರ್ಸ್‌ಗಳು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಎಲ್ಲ ಪ್ರಕ್ರಿಯೆ ಮುಗಿದ ನಂತರ ರೋಗಿಯ ಜೊತೆ ಮಾತನಾಡುವ ವೇಳೆ ಆಕೆಗೆ ಕಿಡ್ನಿ ಸಮಸ್ಯೆ ಇರಲಿಲ್ಲ ಬದಲಿಗೆ ಆಕೆ ಹೊಟ್ಟೆ ನೋವಿನ ಕಾರಣದಿಂದ ಆಸ್ಪತ್ರೆಗೆ ಬಂದಿದ್ದರು ಎಂಬುದು ಸ್ಪಷ್ಟವಾಗಿದೆ. ಇದಾದ ಕೂಡಲೇ ರೋಗಿ ಮತ್ತು ಅಲ್ಲಿದ್ದ ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿ ಆದ ಪ್ರಮಾದವನ್ನು ಸರಿಪಡಿಸಲು ಮರುದಿನ ಇನ್ನೊಂದು ಚಿಕಿತ್ಸೆ ನೀಡುವುದಾಗಿ ವೈದ್ಯರು ತಿಳಿಸಿದ್ದರು ಎಮದು ಪ್ರಾಥಮಿಕ ತನಿಖೆಯ ವರದಿಯಲ್ಲಿ ತಿಳಿಸಲಾಗಿದೆ. ರೋಗಿಯ ಮೇಲೆ ನಡೆಸಲಾದ ತಪ್ಪು ಚಿಕಿತ್ಸೆಯ ಬಗ್ಗೆ ರೋಗಿಯ ದಾಖಲೆ ಪುಸ್ತಕದಲ್ಲಿ ಉಲ್ಲೇಖವಿಲ್ಲದಿದ್ದರೂ ಈ ಬಗ್ಗೆ ನರ್ಸ್‌ಗಳ ವರದಿ ಪುಸ್ತಕದಲ್ಲಿ ದಾಖಲಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News