ದುಬೈ: ಚಾಲಕನ ಬದುಕನ್ನೇ ಬದಲಿಸಿದ ‘ಎಪ್ರಿಲ್ ಫೂಲ್’ ಕರೆ!

Update: 2018-04-04 16:04 GMT

ದುಬೈ, ಎ.4: ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಬಿಗ್ ಟಿಕೆಟ್ ರ್ಯಾಫಲ್ ನಲ್ಲಿ ಭಾರತದ ವ್ಯಕ್ತಿಯೊಬ್ಬರು ಬರೋಬ್ಬರಿ 21 ಕೋಟಿ ರೂ.ಗಳನ್ನು ಗೆದ್ದಿದ್ದಾರೆ.

ಕೇರಳದ ಪತನಾಂತಿಟ್ಟದ ಅರನ್ಮುಲಾ ನಗರದ ಜಾನ್ ವರ್ಗೀಸ್ ಎಂಬವರು ದುಬೈಯ ಖಾಸಗಿ ಕಂಪೆನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. 21 ಕೋಟಿ ರೂ.ಗಳನ್ನು ಗೆದ್ದಿರುವ ಬಗ್ಗೆ ಸಂಘಟಕರು ಕರೆ ಮಾಡಿ ತಿಳಿಸಿದಾಗ ಜಾನ್ ರಿಗೆ ಒಂದು ಕ್ಷಣ ನಂಬಲಾಗಲಿಲ್ಲ. ಗೆಳೆಯರು ತನ್ನನ್ನು ಎಪ್ರಿಲ್ ಫೂಲ್ ಮಾಡಿರಬಹುದು ಎಂದು ಅವರು ಭಾವಿಸಿದ್ದರು.

ಕಳೆದ ವರ್ಷದಿಂದಲೇ ಜಾನ್ ಟಿಕೆಟ್ ಗಳನ್ನು ಖರೀದಿಸುತ್ತಿದ್ದರು. ಈ ಬಾರಿ ಅವರ ಅದೃಷ್ಟ ಖುಲಾಯಿಸಿದೆ. ಬಹುಮಾನ ಜಯಿಸಿದ ನಂತರವೂ ಕೇರಳಕ್ಕೆ ಹಿಂದಿರುಗುವ ಆಲೋಚನೆಯಲ್ಲಿ ಜಾನ್ ಇಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ವ್ಯಯಿಸಬೇಕೆಂದಿದ್ದೇನೆ ಎನ್ನುವ ಜಾನ್, “ನಾನು ನನ್ನ ಹಿಂದಿನ ದಿನಗಳನ್ನು ಮರೆಯುವುದಿಲ್ಲ. ಬಡವರಿಗೆ ಸಹಾಯ ಮಾಡುತ್ತೇನೆ” ಎಂದಿದ್ದಾರೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಜಾನ್ ಇದುವರೆಗೆ ಬಳಸುತ್ತಿದ್ದ ಸಾಮಾನ್ಯ ಫೋನ್ ಬದಲಿಗೆ ಸ್ಮಾರ್ಟ್ ಫೋನ್ ಖರೀದಿಸಲಿದ್ದಾರಂತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News