ಬಂದೂಕು ನಿಯಂತ್ರಣಕ್ಕೆ ತಂತ್ರಜ್ಞಾನ ಕಂಪೆನಿಗಳ ಬೆಂಬಲ

Update: 2018-04-04 16:45 GMT

ಸಾನ್‌ಫ್ರಾನ್ಸಿಸ್ಕೊ, ಎ. 4: ಮಹಿಳೆಯೊಬ್ಬರು ‘ಯೂ ಟ್ಯೂಬ್’ ಪ್ರಧಾನಕಚೇರಿಯಲ್ಲಿ ದಾಂಧಲೆ ನಡೆಸಿರುವ ಹಿನ್ನೆಲೆಯಲ್ಲಿ, ಬಂದೂಕು ನಿಯಂತ್ರಣವನ್ನು ಬಿಗಿಗೊಳಿಸುವಂತೆ ಹಲವಾರು ತಂತ್ರಜ್ಞಾನ ಕಂಪೆನಿಗಳ ಕಾರ್ಯನಿರ್ವಹಣಾಧಿಕಾರಿಗಳು ಮಂಗಳವಾರ ಅಮೆರಿಕ ಸರಕಾರವನ್ನು ಒತ್ತಾಯಿಸಿದ್ದಾರೆ.

ನಸೀಮ್ ಅಘ್ದಮ್ ಎಂಬ ಮಹಿಳೆ ಯೂ ಟ್ಯೂಬ್ ಕಚೇರಿಯಲ್ಲಿ ನಡೆಸಿದ ಗುಂಡು ಹಾರಾಟದಲ್ಲಿ ಮೂವರು ಗಾಯಗೊಂಡಿದ್ದಾರೆ. ಅಂತಿಮವಾಗಿ ಮಹಿಳೆ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದಕ್ಕೂ ಮೊದಲು, ಬಂದೂಕು ನಿಯಂತ್ರಣ ವಿಷಯದ ಬಗ್ಗೆ ಮಾತಾಡುವುದರಿಂದ ತಂತ್ರಜ್ಞಾನ ಕಂಪೆನಿಗಳು ಹಿಂಜರಿದಿದ್ದವು.

ಯೂ ಟ್ಯೂಬ್ ಕಚೇರಿಯಲ್ಲಿ ಗುಂಡು ಹಾರಾಟ ನಡೆದ ಬಳಿಕ ಕನಿಷ್ಠ 3 ಪ್ರಮುಖ ತಂತ್ರಜ್ಞಾನ ಕಂಪೆನಿಗಳ ಮುಖ್ಯಸ್ಥರು ಬಂದೂಕು ನಿಯಂತ್ರಣದ ಬಗ್ಗೆ ಮಾತನಾಡಿದ್ದಾರೆ.

‘‘ನಮ್ಮ ಶಾಲೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇದು ಇನ್ನೊಮ್ಮೆ ನಡೆಯದು ಎಂದು ಭಾವಿಸುತ್ತಾ ಹಾಗೂ ಪ್ರಾರ್ಥಿಸುತ್ತಾ ನಾವು ಕೂರುವಂತಿಲ್ಲ. ನಮ್ಮ ನೀತಿಗಳನ್ನು ರೂಪಿಸುವ ಸಮಯವಿದು’’ ಎಂದು ಟ್ವಿಟರ್ ಇಂಕ್ ಮತ್ತು ಸ್ಕ್ವೇರ್ ಇಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್ ಡೋರ್ಸಿ ಟ್ವೀಟ್ ಮಾಡಿದ್ದಾರೆ.

ಇದೇ ರೀತಿಯ ಅಭಿಪ್ರಾಯಗಳನ್ನು ಉಬರ್ ಟೆಕ್ನಾಲಜೀಸ್ ಇಂಕ್ ಸಿಇಒ ಡಾರಾ ಖೋಸ್ರೋಶಾಹೀ ಮತ್ತು ಬಾಕ್ಸ್ ಇಂಕ್ ಸಿಇಒ ಆ್ಯರನ್ ಲೆವೀ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News