ಅಮಿತ್ ಶಾ ಏನು ಕೇಂದ್ರ ಸರಕಾರದ ಪ್ರತಿನಿಧಿಯೇ: ಸಚಿವ ಶರಣಪ್ರಕಾಶ್ ಪಾಟೀಲ್ ಪ್ರಶ್ನೆ

Update: 2018-04-04 16:55 GMT

ಕಲಬುರ್ಗಿ, ಎ.4: ಧರ್ಮವನ್ನು ಒಡೆಯಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಈ ವಿಚಾರದಲ್ಲಿ ಪ್ರತಿಕ್ರಿಯಿಸಲು ಅಮಿತ್ ಶಾ ಏನು ಕೇಂದ್ರ ಸರಕಾರದ ಪ್ರತಿನಿಧಿಯೇ ಎಂದು ಪ್ರಶ್ನಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮವನ್ನು ಯಾರೂ ಒಡೆಯುತ್ತಿಲ್ಲ. ಆದರೂ, ಧರ್ಮವನ್ನು ಒಡೆಯಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿರುವುದರಲ್ಲಿ ಯಾವುದೆ ಅರ್ಥವಿಲ್ಲ ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಮ್ಮ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ವಿಚಾರದ ಕುರಿತು ಕೇಂದ್ರ ಸರಕಾರವೇ ಉತ್ತರ ನೀಡಬೇಕೆ ಹೊರತು, ಅಮಿತ್ ಶಾ ಅಲ್ಲ. ಉತ್ತರಿಸಬೇಕೆಂದರೆ ಮೊದಲು ರಾಜ್ಯ ಸರಕಾರದ ಶಿಫಾರಸ್ಸನ್ನು ಒಪ್ಪುತ್ತಾರೋ ಇಲ್ಲವೋ ಎಂಬುದಕ್ಕೆ ಮೊದಲು ಪ್ರತಿಕ್ರಿಯೆ ನೀಡಲಿ ಎಂದು ಅವರು ಸವಾಲು ಹಾಕಿದರು.

ಪ್ರತ್ಯೇಕ ಧರ್ಮದ ಮಾನ್ಯತೆ ಕುರಿತು ಸ್ಪಷ್ಟವಾದ ಉತ್ತರ ನೀಡುವುದನ್ನು ಬಿಟ್ಟು, ಒಮ್ಮೆ ಲಿಂಗಾಯತ ಸ್ವಾಮೀಜಿಗಳನ್ನು ಹಾಗೂ ಮತ್ತೊಮ್ಮೆ ವೀರಶೈವ ಮಠಾಧೀಶರನ್ನು ಭೇಟಿಯಾಗಿ ಅಮಿತ್ ಶಾ ರಾಜಕೀಯ ಮಾಡುತ್ತಿದ್ದಾರೆ ಎಂದು ಶರಣಪ್ರಕಾಶ್ ಪಾಟೀಲ್ ಟೀಕಿಸಿದರು.

ಬಿಜೆಪಿ ಮುಖಂಡರು ಪ್ರತ್ಯೇಕ ಧರ್ಮ ವಿಚಾರವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ಒಪ್ಪುತ್ತಾರೋ ಇಲ್ಲವೊ ಎಂಬುದಕ್ಕೆ ಮೊದಲು ಕೇಂದ್ರ ಸರಕಾರ ಅಭಿಪ್ರಾಯ ತಿಳಿಸಲಿ. ಆನಂತರ, ಅಮಿತ್ ಶಾ ಇಲ್ಲಿ ಭರವಸೆಗಳನ್ನು ನೀಡಲಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News