ತ್ಯಾಜ್ಯ ಸಮಸ್ಯೆ ಪರಿಹರಿಸಲು ಸಹಕಾರ ನೀಡದಿದ್ದರೆ ಸೂಕ್ತ ಕ್ರಮ: ಬಿಬಿಎಂಪಿಗೆ ತಿಳಿಸಿದ ಹೈಕೋರ್ಟ್

Update: 2018-04-04 17:06 GMT

ಬೆಂಗಳೂರು, ಎ.4: ಬೆಂಗಳೂರು ನಗರದ ನಿವಾಸಿಗಳಿಗೆ ತ್ಯಾಜ್ಯದಿಂದ ಆಗುವಂತಹ ತೊಂದರೆ ತಡೆಯುವ ಸಂಬಂಧ ಸರಕಾರದ ಇತರೆ ಪ್ರಾಧಿಕಾರಗಳು ಅಗತ್ಯ ಸಹಕಾರ ನೀಡದಿದ್ದಲ್ಲಿ ನ್ಯಾಯಾಲಯದ ಗಮನಕ್ಕೆ ತಂದರೆ ಸೂಕ್ತ ಆದೇಶ ನೀಡಲಾಗುವುದು ಎಂದು ಹೈಕೋರ್ಟ್ ಬಿಬಿಎಂಪಿಗೆ ತಿಳಿಸಿದೆ.

ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಪೀಠ, ಬೆಂಗಳೂರು ನಗರದ ಸೌಂದರ್ಯ ಹಾಳಾಗದಂತೆ ನೋಡಿಕೊಳ್ಳುವುದು ಸರಕಾರದ ಎಲ್ಲ ಇಲಾಖೆಗಳ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳು ಹಾಗೂ ಪ್ರಾಧಿಕಾರಗಳು ಕಾರ್ಯನಿರ್ವಹಿಸಬೇಕು. ಯಾವುದಾದರೂ ಪ್ರಾಧಿಕಾರ ಬಿಬಿಎಂಪಿಗೆ ಸಹಕಾರ ನೀಡದಿದ್ದಲ್ಲಿ ನ್ಯಾಯಾಲಯದ ಗಮನಕ್ಕೆ ತರಬೇಕು ಎಂದು ಪಾಲಿಕೆಗೆ ನಿರ್ದೇಶಿಸಿ ವಿಚಾರಣೆಯನ್ನು ಎ.6ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸೀಗೆಹಳ್ಳಿ, ದೊಡ್ಡ ಬಿದರಕಲ್ಲು, ಲಿಂಗದೇವನಹಳ್ಳಿ, ಸುಬ್ಬರಾಯನಪಾಳ್ಯ, ದೊಡ್ಡಬಿದರಕಲ್ಲು, ಕನ್ನಹಳ್ಳಿ, ಚಿಕ್ಕನಾಗಮಂಗಲ ಸೇರಿದಂತೆ ನಗರದ ವಿವಿಧ 7 ಭಾಗಗಳಲ್ಲಿ ಸುಮಾರು 350 ಕೋಟಿ ವೆಚ್ಚ ಮಾಡಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಲಾಗಿದೆ. ಆದರೂ ಈ ವರೆಗೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಜಂಟಿ ಆಯುಕ್ತ ಸರ್ಫರಾಜ್‌ಖಾನ್, ಈ ಘಟಕಗಳಲ್ಲಿ ಯಾವುದೇ ಸಂಸ್ಕರಣಾ ಕಾರ್ಯ ಪ್ರಾರಂಭಿಸಲು ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪೊಲೀಸ್ ಸೇರಿದಂತೆ ಸರಕಾರ ವಿವಿಧ ಪ್ರಾಧಿಕಾರಗಳನ್ನು ಸಹಕಾರವನ್ನು ಪಡೆದು ತ್ಯಾಜ್ಯ ಸಂಸ್ಕರಣೆ ಮಾಡಿ, ಇತರೆ ಪ್ರಾಧಿಕಾರಗಳು ಸಹಕಾರ ನೀಡದಿದ್ದಲ್ಲಿ ನ್ಯಾಯಪೀಠದ ಗಮನಕ್ಕೆ ತಂದರೆ ಸೂಕ್ತ ಆದೇಶ ನೀಡುವುದಾಗಿ ತಿಳಿಸಿತು.

ಅಲ್ಲದೆ, ತ್ಯಾಜ್ಯ ವಿಲೇವಾರಿ ಹಾಗೂ ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿದಂತೆ ತಜ್ಞರ ಅಭಿಪ್ರಾಯ ಪಡೆದುಕೊಳ್ಳಬೇಕು. ಜೊತೆಗೆ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಸರಕಾರೇತರ ಸಂಘ ಸಂಸ್ಥೆಗಳ(ಎನ್‌ಜಿಒ) ಸಲಹೆ ಸೂಚನೆಗಳನ್ನು ಪರಿಗಣಿಸಿ ಸೂಕ್ತ ಕ್ರಮಗಳನ್ನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಪೀಠ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿತು.

ದಂಡ ಪಾವತಿಸಿದ ಬಿಬಿಎಂಪಿ: ನಗರದ ಎಲ್ಲ ವಾರ್ಡ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ್ದ ನಿರ್ದೇಶನಗಳನ್ನು ಪಾಲಿಸದ ಬಿಬಿಎಂಪಿ ಹೈಕೋರ್ಟ್ ನಿರ್ದೇಶನದ ಮೇರೆಗೆ 50 ಸಾವಿರ ದಂಡ ಪಾವತಿಸಿತು. ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್‌ಪ್ರಸಾದ್ ಅವರ ಹೆಸರಿನಿಂದ ಹೈಕೋರ್ಟ್ ರಿಜಿಸ್ಟ್ರಾರ್ ಹೆಸರಿಗೆ 50 ಸಾವಿರದ ದಂಡದ ಮೊತ್ತದ ಚೆಕ್‌ನ್ನು ಪಾವತಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News