ಬೆಂಗಳೂರು: ನಾಗರಿಕ ಸಂಘಟನೆಯಿಂದ ಚುನಾವಣಾ ಪ್ರಣಾಳಿಕೆ

Update: 2018-04-04 18:07 GMT

ಬೆಂಗಳೂರು, ಎ.4: ನಗರದ ನಾಗರಿಕ ಸಂಘಟನೆ ವತಿಯಿಂದ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಿದ್ದು, ಅದನ್ನು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೆ ನೀಡಲಾಗುವುದು. ಅಲ್ಲಿ ಜನರ ಬೇಡಿಕೆ ಏನು ಹಾಗೂ ಅವರು ತಮ್ಮ ಭರವಸೆಗಳನ್ನು ಯಾವ ರೀತಿ ಈಡೇರಿಸಬೇಕು ಎಂಬುದನ್ನು ತಿಳಿಸಿಕೊಡಲಾಗುವುದು ಎಂದು ಸಂಘಟನೆಯ ಕಾರ್ಯನಿರ್ವಾಹಕ ಸದಸ್ಯೆ ಕಾತ್ಯಾಯಿನಿ ಚಾಮರಾಜ್ ತಿಳಿಸಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾತನಾಡಿದ ಅವರು, ಪ್ರತಿ ಐದು ವರ್ಷಕ್ಕೊಮ್ಮೆ ಜನರ ಮುಂದೆ ಬಂದು ಚುನಾವಣೆ ವೇಳೆ ಸುಳ್ಳು ಭರವಸೆ ನೀಡಿ ಹೋಗುತ್ತಾರೆ. ಆದ್ದರಿಂದ ಸುಮಾರು 70 ಸಂಘಟನೆಗಳು ಸೇರಿ ನಗರದ ಜನರ ಸಮಸ್ಯೆ ಹಾಗೂ ಅವರಿಗೆ ಬೇಕಿರುವ ಮೂಲ ಸೌಕರ್ಯಗಳೇನು ಎಂಬುದನ್ನು ಪ್ರಣಾಳಿಕೆಯಲ್ಲಿ ತಿಳಿಸಿಕೊಡಲಾಗುವುದು. ಅವುಗಳನ್ನು ಯಾವ ರೀತಿ ಈಡೇರಿಸಬೇಕು ಎಂಬುದನ್ನು ಸಹ ಅಲ್ಲಿ ತಿಳಿಸಲಾಗುವುದು ಎಂದರು.

ಏ.6ರಂದು ಮ.2.30ಕ್ಕೆ ನಗರದ ಮಿಷನ್ ರಸ್ತೆಯಲ್ಲಿರುವ ಎಸ್‌ಸಿಎಂ ಹೌಸ್(ಸ್ಟುಡೆಂಟ್ ಕ್ರಿಷ್ಚಿಯನ್ ಮೂಮೆಂಟ್ ಆ್ ಇಂಡಿಯಾ ಹೌಸ್)ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್, ಬಿಜೆಪಿಯ ಸುರೇಶ್‌ಕುಮಾರ್, ಜೆಡಿಎಸ್‌ನ ಪಿಜಿಆರ್ ಸಿಂಧ್ಯಾ, ಕಮ್ಯೂನಿಸ್ಟ್ ಪಕ್ಷದ ಜಿ.ಎನ್ ನಾಗರಾಜು, ಎಎಪಿಯ ಪೃಥ್ವಿರಾಜ್ ಪಾಲ್ಗೊಳ್ಳಲಿದ್ದಾರೆ. ಅಂದು ಕಾರ್ಯಕ್ರಮಕ್ಕೆ ಆಗಮಿಸುವ ರಾಜಕೀಯ ಮುಖಂಡರಿಗೆ ಸುಮಾರು 70 ಪುಟಗಳ ಪ್ರಣಾಳಿಕೆಯನ್ನು ನೀಡಲಾಗುವುದು. ಅದರಲ್ಲಿ ಇರುವ ಭರವಸೆಗಳನ್ನು ಅವರು ಹೇಗೆ ಈಡೇರಿಸುತ್ತಾರೆ ಎಂಬ ಕುರಿತು ಸ್ಥಳದಲ್ಲೇ ಪ್ರತಿಕ್ರಿಯೆ ಪಡೆಯಲಾಗುವುದು ಎಂದು ಹೇಳಿದರು.

ಪುಸ್ತಕದ 10 ಪುಟಗಳಲ್ಲಿ ಮುಖ್ಯ ಸಮಸ್ಯೆಗಳಿವೆ. ಉಳಿದಂತೆ ಸಾಮಾನ್ಯರು ದಿನನಿತ್ಯ ಅನುಭವಿಸುವ ತೊಂದರೆ ಬಗ್ಗೆ ವಿವರಿಸಲಾಗಿದೆ. ಅವುಗಳನ್ನು ಗಮನಿಸುವ ರಾಜಕೀಯ ಮುಖಂಡರು ಆ ಕುರಿತು ತಮ್ಮ ಅನಿಸಿಕೆ ಹಂಚಿಕೊಳ್ಳಬೇಕು. ನಂತರ ಅವುಗಳನ್ನು ಕಾರ್ಯರೂಪಕ್ಕೆ ತರುವುದು, ಬಜೆಟ್ ಮಂಡನೆ, ಜನಸ್ಪಂದನೆ, ಜನರು ತಮ್ಮ ಅಹವಾಲು ತೋಡಿಕೊಳ್ಳುವುದು ಸೇರಿದಂತೆ ಸಾಕಷ್ಟು ವಿಷಯಗಳ ಕುರಿತು ಅವರಿಂದ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.

ಶಿಕ್ಷಣ, ಆರೋಗ್ಯ, ವಸತಿ, ಸಾಮಾಜಿಕ ಕಳಕಳಿ, ಮಹಿಳೆಯರ ಹಕ್ಕುಗಳು, ಕೂಲಿ ಹಾಗೂ ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಪುಸ್ತಕದಲ್ಲಿ ಹೇಳಲಾಗಿದೆ ಪ್ರತಿ 3 ಅಥವಾ 6 ತಿಂಗಳಿಗೊಮ್ಮೆ ಅವರು ಜನರ ಮುಂದೆ ಬಂದು ತಮ್ಮ ಸಾಧನೆ ತೋರಿಸಬೇಕು. ಅದನ್ನು ಪರಿಶೀಲಿಸಲು ಜನರಿಗೆ ಅವಕಾಶ ನೀಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News