ಮೇ 2ರವರೆಗೆ ತೀಸ್ತಾ ಸೆಟಲ್ವಾಡ್ ಬಂಧಿಸದಂತೆ ಹೈಕೋರ್ಟ್ ಸೂಚನೆ

Update: 2018-04-05 13:35 GMT

ಮುಂಬೈ, ಎ.5: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹಾಗೂ ಅವರ ಸಹಯೋಗಿ ಜಾವೇದ್ ಆನಂದ್‌ರನ್ನು ಮೇ 2ರವರೆಗೆ ಬಂಧಿಸಬಾರದು ಎಂದು ಬಾಂಬೆ ಹೈಕೋರ್ಟ್ ಸೂಚಿಸಿದೆ.

ಸೆಟಲ್ವಾಡ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಮೇ 2ರವರೆಗೆ ಅರ್ಜಿದಾರರನ್ನು ಬಂಧಿಸದಂತೆ ಸೂಚಿಸಿತು . ಅಲ್ಲದೆ ಶುಕ್ರವಾರ ತನಿಖಾ ಸಮಿತಿ ಎದುರು ಹಾಜರಾಗುವಂತೆ ಹಾಗೂ ಅಗತ್ಯಬಿದ್ದಾಗ ಹಾಜರಾಗುವಂತೆ ಅರ್ಜಿದಾರರಿಗೆ ಸೂಚಿಸಿತು.

ತೀಸ್ತಾ ಸೆಟಲ್ವಾಡ್ ವಿರುದ್ಧ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪದಲ್ಲಿ ಗುಜರಾತ್ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರ ನೇತೃತ್ವದ ‘ಸಬ್‌ರಂಗ್ ಟ್ರಸ್ಟ್’ಎಂಬ ಎನ್‌ಜಿಒ ಸಂಸ್ಥೆ 2008ರಿಂದ 2013ರವರೆಗೆ ಮೋಸದಿಂದ 1.4 ಕೋಟಿ ರೂ. ಮೊತ್ತದ ಕೇಂದ್ರ ಸರಕಾರದ ನಿಧಿಯನ್ನು ಪಡೆದಿದೆ ಎಂದು ಅಹ್ಮದಾಬಾದ್ ಕ್ರೈಂಬ್ರಾಂಚ್ ಪೊಲೀಸರು ಕಳೆದ ವಾರ ಪ್ರಕರಣ ದಾಖಲಿಸಿದ್ದರು.

ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಬಡಮಕ್ಕಳಿಗೆ ಶಿಕ್ಷಣ ಒದಗಿಸಲು ಹಾಗೂ 2002ರ ಗೋದ್ರಾ ಹಿಂಸಾಕಾಂಡದ ಸಂತ್ರಸ್ತರಿಗೆ ನೆರವಾಗುವುದಾಗಿ ತಿಳಿಸಿ ಕೇಂದ್ರ ಸರಕಾರ ನಿಧಿ ಪಡೆದಿದ್ದ ಟ್ರಸ್ಟ್, ಅದನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಲಾಗಿದ್ದು, ಸೆಟಲ್ವಾಡ್ ಹಾಗೂ ಆನಂದ್ ವಿರುದ್ದ ಹಲವು ಪರಿಚ್ಛೇಗಳಡಿ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇವರಿಬ್ಬರು ಸಂಚಾರಪೂರ್ವ ನಿರೀಕ್ಷಣಾ ಜಾಮೀನು ಕೋರಿ ಬುಧವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಆನಂದ್ ಅಗತ್ಯಬಿದ್ದಾಗ ತನಿಖಾ ಸಮಿತಿಯೆದುರು ಹಾಜರಾಗುತ್ತಾರೆ. ಆದರೆ ಸೆಟಲ್ವಾಡ್ ಎಪ್ರಿಲ್ 10ರಿಂದ ಮೇ 15ರವರೆಗೆ ವಿದೇಶಕ್ಕೆ ತೆರಳಲಿರುವ ಕಾರಣ ವಿದೇಶದಿಂದ ವಾಪಸಾದ ಬಳಿಕ ಸಮಿತಿಯೆದುರು ಹಾಜರಾಗಲಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News