ಸಿಜೆಐ ವಿರುದ್ಧ ಪದಚ್ಯುತಿ ನಿಲುವಳಿ ಮಂಡನೆ ವಿಚಾರ ಒಂದು ಮುಗಿದ ಅಧ್ಯಾಯ : ಖರ್ಗೆ

Update: 2018-04-06 08:59 GMT

ಹೊಸದಿಲ್ಲಿ, ಎ. 6: ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಪದಚ್ಯುತಿ ನಿಲುವು ಮಂಡಿಸಲಿವೆ ಎಂಬ ಬಗೆಗಿನ ಊಹಾಪೋಹಗಳಿಗೆ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತೆರೆ ಎಳೆದಿದ್ದಾರೆ. ಅದೊಂದು ಮುಗಿದ ಅಧ್ಯಾಯ ಎಂದು ಖರ್ಗೆ ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದೀಚೆಗೆ ರಾಜ್ಯಸಭೆಯಲ್ಲಿನ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರು ಕಾಂಗ್ರೆಸ್, ಎಡ ಪಕ್ಷಗಳು, ಎನ್‌ಸಿಪಿ, ಎಸ್‌ಪಿ ಹಾಗೂ ಬಿಎಸ್‌ಪಿಯ ಕನಿಷ್ಠ 60 ಸಂಸದರ ಸಹಿಗಳನ್ನು ಸಂಗ್ರಹಿಸಿದ್ದರು. ಇದು ಮುಖ್ಯ ನ್ಯಾಯಮೂರ್ತಿಯ ಪದಚ್ಯುತಿ ನಿಲುವಳಿಗೆ ಅಗತ್ಯ ಸದಸ್ಯರ ಬೆಂಬಲ ಪಡೆಯುವ ಯತ್ನ ಎಂದೇ ತಿಳಿಯಲಾಗಿತ್ತು. ಡಿಎಂಕೆ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷಗಳ ಸಂಸದರು ಸಹಿ ಹಾಕಿರದೇ ಇದ್ದರೆ ಕಾಂಗ್ರೆಸ್ ಪಕ್ಷದೊಳಗೇ ಈ ವಿಚಾರದಲ್ಲಿ ಸಹಮತವಿಲ್ಲ ಎಂದೂ ತಿಳಿಯಲಾಗಿತ್ತು.

''ರಾಜ್ಯಸಭೆಯಲ್ಲಿ ಆ ಬಗ್ಗೆ ಮಾತುಗಳು ಕೇಳಿ ಬಂದಿದ್ದರೂ ಲೋಕಸಭೆಯಲ್ಲಿ ಅದರ ಬಗ್ಗೆ ಚರ್ಚೆ ನಡೆದಿಲ್ಲ, ಈ ವಿಚಾರ ಇಲ್ಲಿಗೇ ಮುಕ್ತಾಯವಾಗಿದೆ, ಪದಚ್ಯುತಿ ನಿಲುವಳಿ ಮಂಡನೆಯ ಪ್ರಶ್ನೆಯೇ ಇಲ್ಲ'' ಎಂದು ಖರ್ಗೆ ಹೇಳಿದ್ದಾರೆ.

ಸಹಿಗಳನ್ನು ಸಂಗ್ರಹಿಸಲಾಗಿತ್ತಲ್ಲವೇ ಎಂಬ ಪ್ರಶ್ನೆಗೆ, ''ಹಲವಾರು ವಿಚಾರಗಳಿಗಾಗಿ ಸಹಿ ಸಂಗ್ರಹ ನಡೆಯುತ್ತದೆ. ಎಸ್‌ಸಿ ಎಸ್‌ಟಿ ಕಾಯಿದೆಯ ಬಗ್ಗೆ ಸುಪ್ರೀಂ ಕೋರ್ಟಿನ ತೀರ್ಪಿನಿಂದ ಜನರು ಸಿಟ್ಟಾಗಿದ್ದಾರೆ. ಪ್ರಧಾನಿ ಕಾರ್ಯಾಲಯದಿಂದ ನ್ಯಾಯಾಧೀಶರೊಬ್ಬರಿಗೆ ಸೂಚನೆ... ಹೀಗೆಲ್ಲ ಮಾತುಗಳು ಕೇಳಿ ಬರುತ್ತಿದೆ. ನನಗೆ ಹೆಚ್ಚೇನೂ ತಿಳಿದಿಲ್ಲ. ಏನಿದ್ದರೂ ಅದೊಂದು ಮುಗಿದ ಅಧ್ಯಾಯ''’ ಎಂದು ಖರ್ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News