ಇಸ್ರೇಲ್ ಸೈನಿಕರ ಗುಂಡಿಗೆ ಮತ್ತೆ 9 ಬಲಿ

Update: 2018-04-07 17:47 GMT

ಗಾಝಾ ಪಟ್ಟಿ (ಫೆಲೆಸ್ತೀನ್), ಎ. 7: ಫೆಲೆಸ್ತೀನ್-ಇಸ್ರೇಲ್ ಗಡಿಯಲ್ಲಿ ಫೆಲೆಸ್ತೀನೀಯರು ಶುಕ್ರವಾರ ನಡೆಸಿದ ಬೃಹತ್ ಪ್ರತಿಭಟನೆಯ ವೇಳೆ ಇಸ್ರೇಲ್ ಗಡಿ ಸೈನಿಕರು ನಡೆಸಿದ ಗೋಲಿಬಾರಿನಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 1,300 ಮಂದಿ ಗಾಯಗೊಂಡಿದ್ದಾರೆ.

ಸುಮಾರು 20,000 ಪ್ರತಿಭಟನಕಾರರು ಗಡಿ ಸಮೀಪ ಜಮಾಯಿಸಿ ಇಸ್ರೇಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಸ್ರೇಲ್ ಸೇನೆಯು ಗಲಭೆ ಚದುರಿಸುವ ವಿಧಾನಗಳಿಗೆ ಅನುಗುಣವಾಗಿ ಕಾರ್ಯಾಚರಣೆ ನಡೆಸಿತು ಹಾಗೂ ನಿಯಮಗಳಿಗೆ ಅನುಸಾರವಾಗಿ ಗುಂಡು ಹಾರಿಸಿತು ಎಂದು ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ಹೇಳಿಕೆಯೊಂದರಲ್ಲಿ ತಿಳಿಸಿದೆ.

ಹೊಗೆಯ ಮರೆಯಲ್ಲಿ ಇಸ್ರೇಲ್‌ಗೆ ನುಗ್ಗಲು ಫೆಲೆಸ್ತೀನೀಯರು ಪ್ರಯತ್ನಗಳನ್ನು ನಡೆಸಿದರು ಹಾಗೂ ಗಡಿ ಸೈನಿಕರತ್ತ ಬೆಂಕಿಯುಂಡೆಗಳು ಮತ್ತು ಸ್ಫೋಟಕ ಸಾಮಗ್ರಿಗಳನ್ನು ಎಸೆದರು ಹಾಗೂ ಭದ್ರತಾ ಬೇಲಿಗೆ ಹಾನಿ ಮಾಡಲು ಪ್ರಯತ್ನಿಸಿದರು ಎಂದು ಐಡಿಎಫ್ ಹೇಳಿದೆ.

ಇಸ್ರೇಲ್‌ನಲ್ಲಿದ್ದ ಆಸ್ತಿಪಾಸ್ತಿಗಳನ್ನು ಬಿಟ್ಟು ಫೆಲೆಸ್ತೀನ್‌ಗೆ ಓಡಿ ಬರಬೇಕಾದ ಅನಿವಾರ್ಯ ಹೊಂದಿದ್ದ ಫೆಲೆಸ್ತೀನೀಯರಿಗೆ ಇಸ್ರೇಲ್‌ನಲ್ಲಿರುವ ತಮ್ಮ ಮೂಲನೆಲೆಗಳಿಗೆ ಮರಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಫೆಲೆಸ್ತೀನೀಯರು ಆರು ವಾರಗಳ ‘ಮಾರ್ಚ್ ಆಫ್ ರಿಟರ್ನ್’ ಆಂದೋಲನ ನಡೆಸುತ್ತಿದ್ದಾರೆ.

‘ಅಧಿಕ ಬಲಪ್ರಯೋಗ’ ಖಂಡಿಸಿದ ವಿಶ್ವಸಂಸ್ಥೆ

ಈ ನಡುವೆ, ಗಾಝಾದಲ್ಲಿ ಮಾರ್ಚ್ 30ರಂದು ನಡೆದ ಪ್ರತಿಭಟನೆಯ ವೇಳೆ, ಇಸ್ರೇಲ್ ಸೈನಿಕರು ‘ಅಧಿಕ ಬಲಪ್ರಯೋಗ’ ಮಾಡಿರುವುದನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿ ಶುಕ್ರವಾರ ಖಂಡಿಸಿದೆ.

ಅಂದಿನ ಪ್ರತಿಭಟನೆಯಲ್ಲಿ ಕನಿಷ್ಠ 16 ಮಂದಿ ಪ್ರಾಣ ಕಳೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ. ಆ ಘಟನೆಯಲ್ಲಿ 1,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಫೆಲೆಸ್ತೀನ್ ಪತ್ರಕರ್ತನ ಹತ್ಯೆ

ಇಸ್ರೇಲ್-ಗಾಝಾ ಗಡಿಯಲ್ಲಿ ಶುಕ್ರವಾರ ಫೆಲೆಸ್ತೀನೀಯರು ನಡೆಸಿದ ಬೃಹತ್ ಪ್ರತಿಭಟನೆಯ ವೇಳೆ ಇಸ್ರೇಲ್ ಸೈನಿಕರು ಹಾರಿಸಿದ ಗುಂಡಿಗೆ ಫೆಲೆಸ್ತೀನ್ ಪತ್ರಕರ್ತರೊಬ್ಬರು ಬಲಿಯಾಗಿದ್ದಾರೆ ಎಂದು ಗಾಝಾ ಪಟ್ಟಿಯಲ್ಲಿರುವ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಮೃತರನ್ನು ಗಾಝಾದಲ್ಲಿರುವ ಐನ್ ಮೀಡಿಯ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುವ ಯಾಸಿರ್ ಮುರ್ತಾಜ ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News