ಕಾಮನ್‌ವೆಲ್ತ್ ಗೇಮ್ಸ್: ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಜಿತು

Update: 2018-04-09 08:26 GMT

ಗೋಲ್ಡ್‌ಕೋಸ್ಟ್, ಎ.9: ಕಾಮನ್‌ವೆಲ್ತ್  ಗೇಮ್ಸ್ ನ ಐದನೇ ದಿನವೂ ಭಾರತ ಚಿನ್ನದ ಬೇಟೆ ಮುಂದುವರಿಸಿದೆ. ಭಾರತದ ಭರವಸೆಯ ಶೂಟರ್ ಜಿತು ರಾಯ್, 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ 235.1 ಅಂಕ ಪಡೆದು ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಭಾರತದ ಮತ್ತೊಬ್ಬ ಸ್ಪರ್ಧಿ ಓಂ ಮಿಥರ್‌ವಾಲ್ ಕಂಚಿನ ಪದಕ ಪಡೆದರು.

ಭಾರತದ ವೆಯ್ಟ್ ಲಿಫ್ಟರ್ ಪ್ರದೀಪ್ ಸಿಂಗ್ 105 ಕೆ.ಜಿ. ವಿಭಾಗದಲ್ಲಿ 352 ಕೆ.ಜಿ. ಭಾರ ಎತ್ತಿ ಭಾರತಕ್ಕೆ ಬೆಳ್ಳಿಪದಕ ಗೆದ್ದುಕೊಟ್ಟರು. ಸ್ನ್ಯಾಚ್‌ನಲ್ಲಿ 152 ಕೆ.ಜಿ.ಹಾಗೂ ಕ್ಲೀನ್ ಅಂಡ್ ಜೆರ್ಕ್‌ನಲ್ಲಿ 200 ಕೆ.ಜಿ. ಭಾರ ಎತ್ತಿದರು.

ಭಾರತ ತಂಡಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿವೆ. ಭಾರತದ ತೇಜಸ್ವಿನ್ ಸರ್ಕಾರ್, ಹೈಜಂಪ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಫೈನಲ್‌ಗೆ 2.27 ಮೀಟರ್ ಅರ್ಹತೆ ನಿಗದಿಪಡಿಸಿದ್ದರೂ, ಯಾವ ಸ್ಪರ್ಧಿಯೂ ಈ ಮಟ್ಟ ತಲುಪಿಲ್ಲ. ಭಾರತದ ತೇಜಸ್ವಿನ್ 2.21 ಮೀಟರ್‌ನೊಂದಿಗೆ ಫೈನಲ್‌ಗೆ ರಹದಾರಿ ಪಡೆದಿದ್ದಾರೆ.

ಸಿಂಗಾಪುರವನ್ನು 3-2 ಪಂದ್ಯಗಳಿಂದ ಸೋಲಿಸುವ ಮೂಲಕ ಟೇಬಲ್ ಟೆನಿಸ್ ಪುರುಷರ ತಂಡ ಫೈನಲ್ ಪ್ರವೇಶಿಸಿತು. ನಿರ್ಣಾಯಕ ಪಂದ್ಯದಲ್ಲಿ ಭಾರತದ ಶರತ್ ಕಮ್ಲಾ, ಕ್ಸೂ ಜೀ ಪಾಂಗ್‌ ಅವರನ್ನು 11-5, 12-10, 12-10 ಅಂತರದಲ್ಲಿ ಸೋಲಿಸಿದರು.

ಅಂತೆಯೇ ಭಾರತದ ಅಪೂರ್ವಿ ಚಾಂಡೇಲ ಮತ್ತು ಮೆಹುಲಿ ಘೋಷ್ 10 ಮೀಟರ್ ಏರ್ ರೈಫಲ್‌ನಲ್ಲಿ ಫೈನಲ್ ತಲುಪಿದ್ದಾರೆ. ಚಾಂಡೇಲ 423.2 ಅಂಕಗಳೊಂದಿಗೆ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ.

ಪ್ರದೀಪ್ ಸಿಂಗ್  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News