ಸುಪ್ರೀಂ ನ್ಯಾಯಮೂರ್ತಿಗಳ ನೇಮಕಾತಿಗೆ ಅಭಿಪ್ರಾಯ ಮುಖ್ಯವಾಗುತ್ತಿದೆ ಹೊರತು ದಕ್ಷತೆಯಲ್ಲ: ನ್ಯಾ.ಚೆಲಮೇಶ್ವರ್

Update: 2018-04-10 07:26 GMT

ಹೊಸದಿಲ್ಲಿ, ಎ.10: ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಅಗತ್ಯವನ್ನು ಹಿರಿಯ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಚೆಲಮೇಶ್ವರ್ ಪ್ರತಿಪಾದಿಸಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸುಪ್ರೀಂಕೋರ್ಟ್‍ಗೆ ಬಡ್ತಿ ನೀಡುವ ವೇಳೆ ಅವರ ಬಗೆಗಿನ ಅಭಿಪ್ರಾಯ ಪ್ರಮುಖವಾಗುತ್ತದೆಯೇ ವಿನಃ ದಕ್ಷತೆಯಲ್ಲ ಎಂದು ಹೇಳಿದ್ದಾರೆ.

"ಭಾರತದ ಉನ್ನತ ನ್ಯಾಯವ್ಯವಸ್ಥೆ: ಸಮಸ್ಯೆಗಳು ಮತ್ತು ಅವಕಾಶಗಳು" ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿಗಳ ಆಯ್ಕೆಗೆ ಕಾರಣವಾಗಿರುವವರು ತಮ್ಮ ಮೌಲ್ಯಮಾಪನವನ್ನು ದಾಖಲೆಗಳಲ್ಲಿ ಪ್ರಸ್ತುತಪಡಿಸಬೇಕು. ಇದರಿಂದ ಬಹುತೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡುವ ವೇಳೆ, ಅವರ ದಕ್ಷತೆ ಹಾಗೂ ಕ್ಷಮತೆಯ ಮೌಲ್ಯಮಾಪನ ಅಪರೂಪ. ಸಾಮಾನ್ಯವಾಗಿ ಈ ಮೌಲ್ಯಮಾಪನದಲ್ಲಿ ಅಭಿಪ್ರಾಯವೇ ಪ್ರಮುಖವಾಗುತ್ತದೆ" ಎಂದು ಹೇಳಿದರು.

ಸುಪ್ರೀಂಕೋರ್ಟ್ ವ್ಯವಸ್ಥೆಯಲ್ಲಿನ ಸುಧಾರಣೆಗಳ ಅಗತ್ಯತೆ ಬಗ್ಗೆ ಮಾತನಾಡಿದ ಅವರು, "ಅದು ಸಾಧ್ಯವಾದರೆ ಸುಪ್ರೀಂಕೋರ್ಟ್‍ನ ಮಂಜೂರಾದ 31 ಹುದ್ದೆಗಳ ಪೈಕಿ ತಲಾ ಒಂದು ಹುದ್ದೆಗೆ ಪ್ರತಿ ರಾಜ್ಯವೂ ಹಕ್ಕು ಪ್ರತಿಪಾದಿಸಬಹುದು" ಎಂದರು. "ಇಂದು ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿ ಹುದ್ದೆ 31 ಇದೆ. 31 ಮಂದಿಯನ್ನು ನೇಮಕ ಮಾಡಿದ ತಕ್ಷಣ, ಪ್ರತಿ ರಾಜ್ಯ ಕೂಡಾ ತನಗೆ ಸುಪ್ರೀಂಕೋರ್ಟ್‍ನಲ್ಲಿ ಒಂದು ಹುದ್ದೆ ಇದೆ ಎಂಬ ಅಭಿಪ್ರಾಯಕ್ಕೆ ಬರಬಹುದು" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News