ಉತ್ತರ ಪ್ರದೇಶ: ಅತ್ಯಾಚಾರ ಸಂತ್ರಸ್ತೆಯ ತಂದೆಗೆ ಹಲ್ಲೆ ಆರೋಪ; ಬಿಜೆಪಿ ಶಾಸಕನ ಸಹೋದರ ಬಂಧನ

Update: 2018-04-10 07:38 GMT

ಲಕ್ನೋ, ಎ.10: ಅತ್ಯಾಚಾರ ಸಂತ್ರಸ್ತೆಯ ತಂದೆಗೆ ಹಲ್ಲೆ ನಡೆಸಿದ ಆರೋಪದಲ್ಲಿ ಬಿಜೆಪಿ ಶಾಸಕನ ಸಹೋದರನನ್ನು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿದ್ದ ಅತ್ಯಾಚಾರ ಸಂತ್ರಸ್ತೆಯ ತಂದೆ ಮೃತಪಟ್ಟ ಘಟನೆ ಸಂಬಂಧ ಶಾಸಕನ ಸಹೋದರನನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ತಂದೆ ಮೇಲೆ ಶಾಸಕನ ಸಹೋದರ ಮತ್ತು ಸಹಚರರು ಹಲ್ಲೆ ಮಾಡಿದ್ದರು ಎಂದು ಆಪಾದಿಸಲಾಗಿದೆ.

ಸಹಾಯಕ ಎಸ್ಪಿ ದಿನೇಶ್ ಸಿಂಗ್ ನೇತೃತ್ವದ ವಿಶೇಷ ತಂಡ ಉನಾವೊ ಬಂಗರ್‍ಮಾವ್ ಕ್ಷೇತ್ರದ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರ ಸಹೋದರ ಅತುಲ್ ಸಿಂಗ್ ಸೆಂಗರ್‍ನನ್ನು ಬಂಧಿಸಿದೆ ಎಂದು ಪೊಲೀಸ್ ವಕ್ತಾರ ರಾಹುಲ್ ಶ್ರೀವಾಸ್ತವ ಹೇಳಿದ್ದಾರೆ. ಪಕ್ಕದ ಉನ್ನಾವೊ ಜಿಲ್ಲೆಯ ಅಡಗುದಾಣದಿಂದ ಆತನನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

18 ವರ್ಷದ ಅತ್ಯಾಚಾರ ಸಂತ್ರಸ್ತೆಯ ತಂದೆಯ ಮೇಲೆ ಅತುಲ್ ಹಾಗೂ ಸಹಚರರು ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾದ ವ್ಯಕ್ತಿ ಮೃತಪಟ್ಟಿದ್ದರು ಎನ್ನಲಾಗಿದೆ. ಸ್ವಯಂಪ್ರೇರಿತ ಹಲ್ಲೆ, ಹತ್ಯೆ ಮತ್ತು ಅಪರಾಧ ಪಿತೂರಿ ಪ್ರಕರಣಗಳನ್ನು ಶಾಸಕನ ಸಹೋದರನ ವಿರುದ್ಧ ದಾಖಲಿಸಲಾಗಿದೆ.

ಪ್ರಕರಣದ ಸತ್ಯಾಂಶಗಳನ್ನು ವಿಶ್ಲೇಷಿಸಿದ ಡಿಜಿಪಿ ಒ.ಪಿ.ಸಿಂಗ್ ಅವರು, ತಕ್ಷಣ ಆರೋಪಿಯ ಬಂಧನಕ್ಕೆ ಸೂಚಿಸಿದ್ದರು. ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಮೇಲೆ ಅತ್ಯಾಚಾರ ಆರೋಪ ಹೊರಿಸಿದ ಯುವತಿಯ ತಂದೆ ಸೋಮವಾರ ಮೃತಪಟ್ಟಿದ್ದರು. ಶಾಸಕರ ಜತೆ ಸಂಪರ್ಕ ಇರುವ ವ್ಯಕ್ತಿಗಳಿಂದ ಹಲ್ಲೆಗೊಳಗಾದ ಅವರು ಪೊಲೀಸ್ ಕಸ್ಟಡಿಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು ಎಂದು ಆಪಾದಿಸಲಾಗಿತ್ತು.

ತಂದೆಯನ್ನು ಜೈಲಿನಲ್ಲಿ ಹತ್ಯೆ ಮಾಡಲಾಗಿದೆ ಎಂದು ಸಂತ್ರಸ್ತೆ ಯುವತಿ ಆಪಾದಿಸಿದ ಹಿನ್ನೆಲೆಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿತ್ತು. ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ, ಸಂತ್ರಸ್ತೆ ರವಿವಾರ ಸಿಎಂ ಆದಿತ್ಯನಾಥ್ ನಿವಾಸದ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News