‘ಬಿಜೆಪಿ ಪಕ್ಷವನ್ನು ಗೆಲ್ಲಿಸುತ್ತೇವೆ’ ಎಂದು ರೈತರಿಂದ ಪ್ರಮಾಣ ಮಾಡಿಸಿದ ಯಡಿಯೂರಪ್ಪ: ಆರೋಪ

Update: 2018-04-10 13:44 GMT

ಬೆಂಗಳೂರು, ಎ. 10: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವೇರುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಮತ್ತು ಪಕ್ಷದ ಪರ ಪ್ರಚಾರಕ್ಕಾಗಿ ರಾಜಕೀಯ ಮುಖಂಡರು ಬೆವರು ಹರಿಸುತ್ತಿದ್ದಾರೆ. ಈ ಮಧ್ಯೆ ಮತದಾರರಿಂದ ನಮ್ಮ ಪಕ್ಷಕ್ಕೆ ಮತ ಹಾಕಬೇಕೆಂದು ಆಣೆ-ಪ್ರಮಾಣ ಮಾಡಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿವೆ.

ಮಂಗಳವಾರ ಇಲ್ಲಿನ ಕೊಪ್ಪಳ ಜಿಲ್ಲೆಯ ಗಂಗಾವತಿಯ ವಿದ್ಯಾನಗರದಲ್ಲಿ ನೀರಿಲ್ಲದೆ ಒಣಗಿದ ಭತ್ತದ ಬೆಳೆ ವೀಕ್ಷಿಸಿ ಭತ್ತದ ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ‘ಬಿಜೆಪಿ ಪಕ್ಷವನ್ನು ಗೆಲ್ಲಿಸುತ್ತೇವೆ’ ಎಂದು ರೈತರಿಂದ ಪ್ರಮಾಣಮಾಡಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂಬ ಆರೋಪ ಕೇಳಿಬಂದಿದೆ.

ರಾಜ್ಯ ಸರಕಾರ ಸತ್ತಿದೆ: ತುಂಗಭದ್ರಾ ಜಲಾಶಯದ ನೀರಿನ ಅಸಮರ್ಪಕ ನಿರ್ವಹಣೆಯಿಂದ ಎರಡನೆ ಬೆಳೆಗೆ ನೀರು ಇಲ್ಲವಾಗಿದೆ. 1.5ಲಕ್ಷ ಎಕರೆ ಪ್ರದೇಶದಲ್ಲಿದ್ದ ಭತ್ತದ ಬೆಳೆ ಹಾಳಾಗಿದೆ. ಇದರಿಂದ 500 ಕೋಟಿ ರೂ.ಮೌಲ್ಯದ ಭತ್ತ ನಷ್ಟವಾಗಿದೆ. ಪರಿಹಾರ ಕಲ್ಪಿಸಬೇಕಿದ್ದ ರಾಜ್ಯ ಸರಕಾರ ಸತ್ತಿದೆ. ಆದರೆ, ಅಧಿಕಾರಿಗಳು ಸತ್ತಿದ್ದಾರೆಯೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ದ್ರೋಹ ಬಗೆದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನೀರಾವರಿಗೆ 1 ಲಕ್ಷ ಕೋಟಿ ರೂ. ಕೊಡುತ್ತೇನೆ. ಬೇರೆ ಅಭಿವೃದ್ಧಿ ಕೆಲಸ ನಿಂತರೂ ಪರವಾಗಿಲ್ಲ ರೈತರ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದಾಗ ರೈತರ ಸಮಸ್ಯೆಗಳನ್ನ ತಿಳಿದುಕೊಂಡಿದ್ದಾರೆ. ರೈತರ ಮೇಲೆ ಸಿಎಂ ಸಿದ್ದರಾಮಯ್ಯ ಕೇಸ್ ಹಾಕಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ರೈತರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯುತ್ತೇವೆ ಎಂದರು.

ರೈತರ ಕೃಷಿ ಪಂಪ್‌ಸೆಟ್‌ಗೆ ಕನಿಷ್ಟ 12ಗಂಟೆ ವಿದ್ಯುತ್ ಕೊಡುತ್ತೇವೆ ಎಂಬ ವಾಗ್ದಾನ ನೀಡಿದ್ದ ಸಿದ್ದರಾಮಯ್ಯ, ಕನಿಷ್ಟ ಆರು ತಾಸು ವಿದ್ಯುತ್ ನೀಡಲು ಆಗುತ್ತಿಲ್ಲ. ಆದರೆ, ಸಿದ್ದರಾಮಯ್ಯ ರೈತರ ಸಾಲಮನ್ನಾ ಹೆಸರಲ್ಲಿ ನಾಟಕ ಮಾಡುತ್ತಿದಾರೆ. ಸಿದ್ದರಾಮಯ್ಯ ರಾಜ್ಯದ ಎಲ್ಲ ಖಜಾನೆ ಖಾಲಿ ಮಾಡುವ ಕೆಲಸ ಮಾಡುತ್ತಿದ್ದಾರೆಂದು ಟೀಕಿಸಿದರು.

ಆಣೆ-ಪ್ರಮಾಣ: ಹಸಿರು ಶಾಲು ಧರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮುಷ್ಟಿ ಧಾನ್ಯ ಅಭಿಯಾನದಲ್ಲಿ ಸಂಗ್ರಹಿಸಿದ ಅಕ್ಕಿಯಿಂದ ತಯಾರಿಸಿದ ಪ್ರಸಾದ ಸೇವಿಸಿದರು. ಆ ಬಳಿಕ ರೈತರಿಂದ ‘ಬಿಜೆಪಿ ಗೆಲ್ಲಿಸುತ್ತೇವೆ’ ಎಂದು ಪ್ರಮಾಣ ಮಾಡಿಸಲಾಯಿತು ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News