ಎಸ್ಸಿ-ಎಸ್ಟಿ, ಓಬಿಸಿ ಮತಗಳಿಕೆಗೆ ಗಮನಹರಿಸದಿದ್ದರೆ ಬಿಜೆಪಿಗೆ ಸೋಲು: ಬಿ.ಎಸ್.ಯಡಿಯೂರಪ್ಪ
ಬೆಂಗಳೂರು, ಎ. 11: ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರ ಬಗ್ಗೆ ಗಮನಹರಿಸದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬರುವುದಿಲ್ಲ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಇಲ್ಲಿನ ಅರಮನೆ ಮೈದಾನದಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ 1 ತಿಂಗಳ ಕಾಲ ಮನೆ-ಮಠ ಮರೆತು ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿಸಲು ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವರ ತಂಡವೇ ರಾಜ್ಯ ಪ್ರವಾಸ ಮಾಡಿದೆ. ಬೇರೆ ಯಾವುದೇ ಚುನಾವಣೆಯಲ್ಲಿ ಕೇಂದ್ರದ ತಂಡ ಇಷ್ಟೊಂದು ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಂಡ ಉದಾಹರಣೆ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿ ಮೇಲೆ ಕೆಸರು ಎರಚುವ ಬಗ್ಗೆ ಎಚ್ಚರ ವಹಿಸಬೇಕು. ಆದರೆ, ಯಾವುದೇ ಕಾರಣಕ್ಕೂ ಕಾನೂನು ಮೀರಬಾರದು ಎಂದು ಸಲಹೆ ಮಾಡಿದ ಅವರು, ಅಭ್ಯರ್ಥಿ ಸೋಲು ಬಿಜೆಪಿ ಪಕ್ಷದ ಸೋಲು. ಹೀಗಾಗಿ, ಪ್ರತಿಬೂತ್‌ನಲ್ಲಿ ಶೇ.70ಕ್ಕಿಂತ ಹೆಚ್ಚು ಮತ ಪಡೆಯಲು ಮನವೊಲಿಸುವ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಆಡಳಿತದಿಂದ ರಾಜ್ಯದ ಜನ ಬೇಸತ್ತಿದ್ದಾರೆ. ನೀರಾವರಿಗೆ ಆದ್ಯತೆ ನೀಡಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿಗಾಗಿ 1ಲಕ್ಷ ಕೋಟಿ ರೂ.ಅನುದಾನವನ್ನು ಒದಗಿಸುವ ಮೂಲಕ ಸಂಕಷ್ಟದಲ್ಲಿರುವ ರೈತರ ಕಣ್ಣೀರು ಒರೆಸುವೆ ಎಂದು ಅಭಯ ನೀಡಿದರು.
ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರದಲ್ಲೆ ಅಸ್ತಿತ್ವ ಕಳೆದುಕೊಂಡಿದ್ದು, ಕಾಂಗ್ರೆಸ್ ಸೋಲು ಮೈಸೂರಿನಿಂದಲೇ ಆರಂಭವಾಗಲಿದೆ ಎಂದು ಭವಿಷ್ಯ ನುಡಿದ ಬಿಎಸ್‌ವೈ, ಈಗಾಗಲೇ ಬಿಡುಗಡೆ ಮಾಡಿರುವ 72ಅಭ್ಯರ್ಥಿಗಳ ಪಟ್ಟಿಯಲ್ಲಿ 68 ಸ್ಥಾನ ಗೆಲ್ಲಲಿದ್ದೇವೆ. 2ನೆ ಹಂತದ ಪಟ್ಟಿಯಲ್ಲಿ 80 ಸ್ಥಾನ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಾಗಾರದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್, ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.