×
Ad

ನಮ್ಮ ಗೌರವದ ಕೇಂದ್ರಗಳಿಗೆ ನೀವು ಬರಬೇಡಿ: ಅಮಿತ್ ಶಾಗೆ ರಾಘವೇಂದ್ರ ಕುಷ್ಟಗಿ ಮನವಿ

Update: 2018-04-11 19:39 IST

ಬೆಂಗಳೂರು, ಎ. 11: ‘ನಮ್ಮ ಸಂಸ್ಕೃತಿ, ಗೌರವದ ಸಾಂಸ್ಕೃತಿಕ ಕೇಂದ್ರಗಳಿಗೆ ನೀವು ಭೇಟಿ ನೀಡುವುದು ಬೇಡ’ ಎಂದು ಜನಾಂದೋಲನ ಮಹಾ ಮೈತ್ರಿ ಸಂಘಟನೆ ಮುಖಂಡ ರಾಘವೇಂದ್ರ ಕುಷ್ಟಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಮನವಿ ಮಾಡಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತು’ ಎಂಬ ಕವನ ಬರೆದ ವರಕವಿ ದ.ರಾ.ಬೇಂದ್ರೆಯವರ ಮನೆಗೆ, ಬೇಕಾಬಿಟ್ಟಿಯಾಗಿ ಹಣ ಚೆಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡುತ್ತಿರುವುದು ದುರಂತ ಎಂದು ಟೀಕಿಸಿದರು.

ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕ ರಾಜ್ಯದ ಸೌಹಾರ್ದದ ಸಂಕೇತವಾದ ಸಿದ್ಧಾರೂಢ ಮಠಕ್ಕೆ ಭೇಟಿ ನೀಡುತ್ತಿರುವುದು ವಿಪರ್ಯಾಸ ಎಂದು ರಾಘವೇಂದ್ರ ಕುಷ್ಟಗಿ ಇದೇ ವೇಳೆ ಆಕ್ಷೇಪಿಸಿದರು.

ಜಾತ್ಯತೀತ ಜನತಾದಳ, ಕಾಂಗ್ರೆಸ್, ಬಿಜೆಪಿ (ಜೆಸಿಬಿ)ಯಂತಹ ಪಕ್ಷಗಳು ಮನೆಯೊಂದು ಮೂರು ಬಾಗಿಲು ಇದ್ದಂತೆ. ಈ ಮೂರೂ ಪಕ್ಷಗಳು ದೊಡ್ಡ-ದೊಡ್ಡ ಬಂಡವಾಳಶಾಹಿ, ಕಾರ್ಪೋರೆಟ್ ಕಂಪೆನಿಗಳ ಪಾದಸೇವೆ ಮಾಡುತ್ತವೆ ಎಂದು ಅವರು ವಾಗ್ದಾಳಿ ನಡೆಸಿದರು.

‘ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಂತೋಷ ನರಗುಂದ ಅವರಿಗೆ ಜನಾಂದೋಲನ ಮಹಾಮೈತ್ರಿಯಿಂದ ಬೆಂಬಲ ನೀಡಿದ್ದೇವೆ. ಸಂತೋಷ ಅವರನ್ನು ಗೆಲ್ಲಿಸುವ ಮೂಲಕ ಭ್ರಷ್ಟರಿಗೆ ಪಾಠ ಕಲಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಂತೋಷ್ ನರಗುಂದ, ಸಹ ಸಂಚಾಲಕರಾದ ಶಿವಕುಮಾರ್, ಚೆಂಗಲರಾಯ ಸೇರಿದಂತೆ ಜನಾಂದೋಲನ ಮಹಾಮೈತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News