‘ನವ ಬೆಂಗಳೂರು’ ನಿರ್ಮಾಣಕ್ಕೆ ಬಿಜೆಪಿ ಸಂಕಲ್ಪ
ಬೆಂಗಳೂರು, ಎ.11: ಕಾನೂನು ಸುವ್ಯವಸ್ಥೆ, ಟ್ರಾಫಿಕ್ ಕಿರಿಕಿರಿ, ಕುಡಿಯುವ ನೀರು, ಕಸ ವಿಲೇವಾರಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಜಧಾನಿ ಬೆಂಗಳೂರು ನಗರವನ್ನು ನಾಗರಿಕರ ಪರ, ಉದ್ಯಮ ಸ್ನೇಹಿ, ಉತ್ತಮ ಪರಿಸರ ನಗರವನ್ನಾಗಿ ಮಾಡಲು ಬಿಜೆಪಿ ಸಂಕಲ್ಪ ಮಾಡಿದೆ.
ಬುಧವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ‘ನವ ಬೆಂಗಳೂರು’ ಚರ್ಚೆ ಕಾರ್ಯಕ್ರಮದಡಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳೊಂದಿಗೆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿನ ಅನೇಕ ಸಮಸ್ಯೆಗಳನ್ನು ಪ್ರಸ್ತಾಪಿಸಿದ ವಿದ್ಯಾರ್ಥಿಗಳು, ಸಮಸ್ಯೆಗಳಿಗೆ ಪರಿಹಾರಕ್ಕೆ ತಮ್ಮ ಆಲೋಚನೆಗಳು ಹಾಗೂ ಸಲಹೆಗಳನ್ನು ನೀಡಿದರು.
ಉದ್ಯಾನನಗರಿ ಎನಿಸಿಕೊಂಡಿದ್ದ ಬೆಂಗಳೂರು ಇಂದು ಕಸದ ನಗರವಾಗಿ ಮಾರ್ಪಟ್ಟಿದೆ. ಟ್ರಾಫಿಕ್, ಹದಗೆಟ್ಟ ಕಾನೂನು ಸುವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ನಾಗರಿಕರು ಬೇಸತ್ತಿದ್ದಾರೆ. ಉದ್ಯಮಿಗಳು ರಾಜ್ಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಲಂಚ, ಭ್ರಷ್ಟಾಚಾರದಿಂದ ಬೆಂಗಳೂರು ಸಮಸ್ಯೆಗಳ ಕೂಪವಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಕಸ ವಿಲೇವಾರಿ ಗುತ್ತಿಗೆಯಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಶಾಮೀಲಾಗಿ ಟೆಂಡರ್ ಮೊತ್ತದ ಮುಕ್ಕಾಲು ಭಾಗ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಕಸ ವಿಲೇವಾರಿಯಲ್ಲಿ ದೊಡ್ಡ ಮಾಫಿಯಾ ಸೃಷ್ಟಿಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ, ಈ ಮಾಫಿಯಾಗೆ ಕಡಿವಾಣ ಹಾಕಿ, ವೈಜ್ಞಾನಿಕ ರೀತಿಯಲ್ಲಿ ಕಸ ವಿಂಗಡನೆ, ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಎಲ್ಲ ಹಂತಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಕಷ್ಟಪಟ್ಟು ಓದುವವರಿಗೆ ಕೆಪಿಎಸ್ಸಿಯಲ್ಲಿ ಉದ್ಯೋಗ ಸಿಗುತ್ತಿಲ್ಲ. ಸರಕಾರಿ ಕಚೇರಿಗಳಲ್ಲಿ ಒಳ್ಳೆಯ ಅಧಿಕಾರಿಗಳಿದ್ದರೆ, ರಾಜಕೀಯ ಮಧ್ಯಪ್ರವೇಶವಾಗದಿದ್ದರೆ ಭ್ರಷ್ಟಾಚಾರ ನಿಯಂತ್ರಣಕ್ಕೆ ತರಬಹುದು. ಯುವಕರು ಭ್ರಷ್ಟಾಚಾರ ವಿರುದ್ಧ ಯುವ ಜನತೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಯಡಿಯೂರಪ್ಪ ಕರೆ ನೀಡಿದರು.
ನಗರದಲ್ಲಿ ಕೊಳಚೆ ಪ್ರದೇಶಗಳ ಸ್ಥಿತಿ ಸುಧಾರಣೆ ಮಾಡುವುದರ ಮೂಲಕ ಬಡತನ ತಗ್ಗಿಸಬಹುದಾಗಿದೆ. ಬಿಡಿಎನಲ್ಲಿ ಪ್ರಾಮಾಣಿಕ ಅಧಿಕಾರಿಗಳ ಕೊರತೆಯಿಂದ ಕೊಳಚೆ ಪ್ರದೇಶಗಳು ಅಭಿವೃದ್ಧಿಯಾಗುತ್ತಿಲ್ಲ. ಕೊಳಗೇರಿ ನಿವಾಸಿಗಳು ಬಹುಮಹಡಿ ವಸತಿ ಸಮುಚ್ಛಯಕ್ಕೆ ಒಪ್ಪುತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ, ಕೊಳಚೆ ಪ್ರದೇಶ ವಾಸಿಗಳ ಮನವೊಲಿಸಿ, ಅವರು ವಾಸಿಸುತ್ತಿರುವ ಸ್ಥಳದಲ್ಲೆ ಮೂರ್ನಾಲ್ಕು ಅಂತಸ್ತಿನ ವಸತಿ ಕಾಲನಿ ನಿರ್ಮಿಸಲಾಗುವುದು. ಹೊಸ ಕೊಳಗೇರಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ನಗರದಲ್ಲಿ ಮಳೆ ನೀರು, ಚರಂಡಿ ನೀರು ಸರಿಯಾಗಿ ಹರಿಯಲು ವ್ಯವಸ್ಥೆ ಕಲ್ಪಿಸದಿರುವುದರಿಂದ ಮಳೆ ಬಂದರೆ ಪ್ರವಾಹ ಉಂಟಾಗುತ್ತಿದೆ. ಮುಂದೆ ಬರಲಿರುವ ಬಿಜೆಪಿ ಸರಕಾರ ಹೊಸ ಕೆರೆಗಳ ನಿರ್ಮಾಣ ಮಾಡಲಿದ್ದು, ಕೆರೆಗಳ ಒತ್ತುವರಿ ತೆರವು ಮಾಡಲು ಕ್ರಮ ತೆಗೆದುಕೊಳ್ಳಲಿದೆ. ಬೆಂಗಳೂರು ಮತ್ತಷ್ಟು ಅಗಾಧವಾಗಿ ಬೆಳೆಯಲು ಬಿಡದೆ ಹೊಸ ನಗರಗಳ ನಿರ್ಮಾಣ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ದೊಡ್ಡ ಸಮಸ್ಯೆಯಾಗಿದ್ದು, ಜನರು ನಿರ್ಭೀತಿಯಿಂದ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಜನರು ಗೌರವದಿಂದ ಓಡಾಡುವಂತೆ ಮಹಿಳೆಯರ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರಮೋದಿ ಯುವಕರ ಬಗ್ಗೆ ಅಪಾರ ವಿಶ್ವಾಸವಿಟ್ಟಿದ್ದಾರೆ. 21ನೇ ಶತಮಾನ, ಭಾರತದ ಶತಮಾನವಾಗುವುದರಲ್ಲಿ ಯುವಕರ ಪಾತ್ರ ದೊಡ್ಡದಾಗಿದೆ. ಯುವಕರು ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವ ಬಲಗೊಳಿಸಬೇಕು. ಮತದಾನ ಕುರಿತು ಜಾಗೃತಿ ಮೂಡಿಸಬೇಕು ಎಂದು ಯಡಿಯೂರಪ್ಪ ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸಹ ವಕ್ತಾರ ಮಾಳವಿಕಾ ಅವಿನಾಶ್ ಸೇರಿದಂತೆ ಅನೇಕ ಯುವಕ-ಯುವತಿಯರು ಚರ್ಚೆಯಲ್ಲಿ ಭಾಗವಹಿಸಿದ್ದರು.