ಮಾಲೀಕಯ್ಯ ಗುತ್ತೇದಾರ್ ಮೊದಲು ಗೆದ್ದು ತೋರಿಸಲಿ: ಸಚಿವ ಪ್ರಿಯಾಂಕ್ ಖರ್ಗೆ
Update: 2018-04-11 20:04 IST
ಕಲಬುರ್ಗಿ, ಎ. 11: ಅಫ್ಜಲ್‌ಪುರ ಕ್ಷೇತ್ರದಲ್ಲಿ ಖುದ್ಧ ತಾನು ಪ್ರಚಾರ ನಡೆಸುತ್ತೇನೆ. ಅಪ್ಪ-ಮಗನನ್ನು ಸೋಲಿಸುತ್ತೇನೆಂದು ಹೇಳುವ ಮಾಲೀಕಯ್ಯ ಗುತ್ತೇದಾರ್ ಆ ಕ್ಷೇತ್ರದಲ್ಲಿ ಗೆದ್ದು ತೋರಿಸಲಿ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಬುಧವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ‘ಬಚ್ಚಾ’ ಯಾರು ಎಂಬುದನ್ನು ಜನತೆ ತೀರ್ಮಾನಿಸಲಿದ್ದಾರೆ. ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದಿಂದ ಸ್ಪರ್ಧಿಸುತ್ತೇನೆಂಬುದು ಸುಳ್ಳು ಸುದ್ದಿ. ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲು ಬಿಜೆಪಿ ಗಾಳಿ ಸುದ್ದಿ ಹಬ್ಬಿಸಿದೆ ಎಂದು ದೂರಿದರು.
ತಾನು ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾವಣೆ ಮಾಡುವುದಿಲ್ಲ. ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದ ಅವರು, ಕಾಂಗ್ರೆಸ್ ಅಭ್ಯರ್ಥಿಗಳ ನಕಲಿ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದೊಂದು ಸುಳ್ಳು ಸುದ್ದಿ ಎಂದು ಪ್ರತಿಕ್ರಿಯಿಸಿದರು.