×
Ad

ಬೆಂಗಳೂರು: ಚಿನ್ನಾಭರಣ ನೀಡುವುದಾಗಿ ನಂಬಿಸಿ ವಂಚನೆ; ಇಬ್ಬರ ಬಂಧನ

Update: 2018-04-11 22:19 IST

ಬೆಂಗಳೂರು, ಎ.11: 1 ಕೆಜಿ ಚಿನ್ನಾಭರಣ ನೀಡುವುದಾಗಿ ನಂಬಿಸಿ 15 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪ ಪ್ರಕರಣ ಸಂಬಂಧ ಹೊರರಾಜ್ಯದ ಇಬ್ಬರನ್ನು ಇಲ್ಲಿನ ಆವಲಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಮೂಲದ ವೆಂಕಟೇಶ್ ಮತ್ತು ಚಂದ್ರಶೇಖರ್ ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದು, 6.20 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.
ಕಿತ್ತಗನೂರು ಬಿದರಹಳ್ಳಿಯ ತ್ಯಾಗರಾಜು ಎಂಬುವರ ಬಳಿಗೆ ಬಂದ ಆರೋಪಿಗಳು ನಮ್ಮ ಬಳಿ ಒಂದು ಕೆಜಿ ಚಿನ್ನಾಭರಣ ಇದೆ. ಇದನ್ನ ತೆಗೆದುಕೊಂಡು ಬರಲಿದ್ದೇವೆ ಎಂದು ಹೇಳಿ 15 ಲಕ್ಷಕ್ಕೆ ವ್ಯಾಪಾರ ಮಾಡಿಕೊಂಡಿದ್ದರು ಎನ್ನಲಾಗಿದೆ.

ಅದರಂತೆ ತ್ಯಾಗರಾಜ್ 15 ಲಕ್ಷ ಹಣವನ್ನ ತೆಗೆದುಕೊಂಡು ಬಂದು ಆವಲಹಳ್ಳಿ ಬಳಿ ವೆಂಕಟೇಶ್‌ಗೆ ನೀಡಿದ್ದಾರೆ. ಬಳಿಕ ಹಣ ತೆಗೆದುಕೊಂಡ ಆರೋಪಿ ವೆಂಕಟೇಶ್ ಚಿನ್ನ ಮನೆಯಲ್ಲಿದೆ ಎಂದು ಹೇಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಟಾಟಾ ಸುಮೋದಲ್ಲಿ ಬಂದ ದುಷ್ಕರ್ಮಿಗಳು ವೆಂಕಟೇಶ್‌ನನ್ನ ಹೊಡೆದ ರೀತಿ ನಟಿಸಿ ಆತನನ್ನು ಮತ್ತು ಹಣವನ್ನ ಕಸಿದು ಪರಾರಿಯಾಗಿದ್ದರು.

ಈ ವೇಳೆ ಹಣ ಕಳೆದುಕೊಂಡ ತ್ಯಾಗರಾಜ್, ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ವಂಚನೆ ಮಾಡಿದ್ದ ವೆಂಕಟೇಶ್ ಹಾಗೂ ಚಂದ್ರಶೇಖರ್‌ನನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News