ಕುಸ್ತಿಪಟುಗಳಿಗೆ ಅವಳಿ ಚಿನ್ನ ; ಭಾರತಕ್ಕೆ ಏಳು ಪದಕ

Update: 2018-04-12 18:40 GMT

ಗೋಲ್ಡ್‌ಕೋಸ್ಟ್, ಎ.12: ಕಾಮನ್‌ವೆಲ್ತ್ ಗೇಮ್ಸ್‌ನ 8ನೇ ದಿನವಾದ ಗುರುವಾರ ಭಾರತ ಎರಡು ಚಿನ್ನ ಸಹಿತ ಒಟ್ಟು ಏಳು ಪದಕಗಳನ್ನು ಬಾಚಿಕೊಂಡಿದೆ. ಕುಸ್ತಿಪಟುಗಳು ನಾಲ್ಕು ಪದಕಗಳನ್ನು ಜಯಿಸುವ ಮೂಲಕ ಭಾರತದ ಪದಕದ ಸಂಖ್ಯೆ ಹಿಗ್ಗಿಸಿದರು.

ಹಿರಿಯ ಕುಸ್ತಿಪಟು ಸುಶೀಲ್‌ಕುಮಾರ್(74ಕೆಜಿ) ಹಾಗೂ ರಾಹುಲ್ ಅವಾರೆ(57ಕೆಜಿ) ಚಿನ್ನದ ಪದಕ ಜಯಿಸಿದರೆ, ಬಬಿತಾ ಕುಮಾರಿ(53ಕೆಜಿ) ಹಾಗೂ ಕಿರಣ್ ಬಿಶ್ನೋಯ್(76ಕೆಜಿ) ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದಾರೆ.

ಶೂಟರ್ ತೇಜಸ್ವಿನಿ ಸಾವಂತ್ ಮಹಿಳೆಯರ 50 ಮೀ.ರೈಫಲ್ ಪ್ರೋನ್‌ನಲ್ಲಿ ಬೆಳ್ಳಿ ಜಯಿಸಿದರು. 2006ರ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ 2 ಚಿನ್ನ ಜಯಿಸಿದ್ದ ಹಿರಿಯ ಶೂಟರ್‌ಗೆ ಇದು ಆರನೇ ಕಾಮನ್‌ವೆಲ್ತ್ ಗೇಮ್ಸ್ ಪದಕವಾಗಿದೆ.

ಅಥ್ಲೆಟಿಕ್ಸ್ ವಿಭಾಗದಲ್ಲಿ ಸೀಮಾ ಪೂನಿಯಾ ಹಾಗೂ ನವಜೀತ್ ದಿಲ್ಲೋನ್ ಮಹಿಳೆಯರ ಡಿಸ್ಕಸ್ ಎಸೆತ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದ್ದಾರೆ. ಈ ಮೂಲಕ ಗೇಮ್ಸ್‌ನ 8ನೇ ದಿನದಂತ್ಯಕ್ಕೆ ಭಾರತದ ಪದಕದ ಸಂಖ್ಯೆ 31ಕ್ಕೇರಿದೆ.

ಪದಕದ ವಿಶ್ವಾಸ ಮೂಡಿಸಿದ ಮಾನಿಕಾ ಬಾತ್ರಾ: ವನಿತೆಯರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿರುವ ಟೇಬಲ್ ಟೆನಿಸ್ ಆಟಗಾರ್ತಿ ಮಾನಿಕಾ ಬಾತ್ರಾ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದರು.

ಮಾನಿಕಾ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯದ ಟ್ರಾಸಿ ಫೆಂಗ್‌ರನ್ನು 11-6, 11-6, 9-11, 11-9, 11-7 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಸಿಂಗಾಪುರದ ಯಿಹಾನ್ ಝೌರನ್ನು 11-5, 11-6, 11-2, 6-11, 11-9 ಅಂತರದಿಂದ ಸೋಲಿಸಿದರು. ಮಾನಿಕಾ ಶುಕ್ರವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಸಿಂಗಾಪುರದ ಟಿಯಾನ್ ವೀ ಫೆಂಗ್‌ರನ್ನು ಎದುರಿಸಲಿದ್ದಾರೆ.

ಬ್ಯಾಡ್ಮಿಂಟನ್: ಐವರು ಶಟ್ಲರ್‌ಗಳು ಕ್ವಾರ್ಟರ್‌ಫೈನಲ್‌ಗೆ

ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಐವರು ಶಟ್ಲರ್‌ಗಳಾದ ವಿಶ್ವದ ನಂ.1 ಆಟಗಾರ ಕೆ.ಶ್ರೀಕಾಂತ್, ಎಚ್.ಎಸ್.ಪ್ರಣಯ್, ಪಿ.ವಿ.ಸಿಂಧು, ಋತ್ವಿಕಾ ಹಾಗೂ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಶ್ರೀಕಾಂತ್ ಶ್ರೀಲಂಕಾದ ನಿಲುಕಾ ಕರುಣರತ್ನೆ ಅವರನ್ನು 21-10, 21-10 ಅಂತರದಿಂದ ಮಣಿಸಿದರು. ಶುಕ್ರವಾರ ಸಿಂಗಾಪುರದ ಝಿನ್ ರೆಸ್ ರಿಯಾನ್‌ರನ್ನು ಎದುರಿಸಲಿದ್ದಾರೆ.

ಆಸ್ಟ್ರೇಲಿಯದ ಆಂಥೋನಿ ಜೋರನ್ನು 21-18, 21-11 ಗೇಮ್‌ಗಳಿಂದ ಮಣಿಸಿದ ಪ್ರಣಯ್ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಲಂಕಾದ ದಿನುಕಾ ಕರುಣರತ್ನ ಅವರನ್ನು ಎದುರಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನ ಅಂತಿಮ-16ರ ಸುತ್ತಿನಲ್ಲಿ ಸಿಂಧು ಆಸ್ಟ್ರೇಲಿಯದ ಸುಯಾನ್-ಯು ಚೆನ್‌ರನ್ನು 21-15, 21-9 ಅಂತರದಿಂದ ಸೋಲಿಸಿದರು. ಶುಕ್ರವಾರ ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಕೆನಡಾದ ಬ್ರಿಟ್ನಿ ಟ್ಯಾಮ್‌ರನ್ನು ಎದುರಿಸಲಿದ್ದಾರೆ.

ಋತ್ವಿಕಾ ಸಿಂಗಾಪುರದ ಜಿಯಾ ಮಿನ್‌ರನ್ನು 21-10, 21-23 ಗೇಮ್‌ಗಳಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಸ್ಕಾಟ್ಲೆಂಡ್‌ನ ಕಿರ್ಸ್ಟಿ ಗ್ಲಿವೌರ್‌ರನ್ನು ಎದುರಿಸಲಿದ್ದಾರೆ. ಎದುರಾಳಿ ಜೆಸ್ಸಿಕಾ ಲೀ ಗಾಯಾಳು ನಿವೃತ್ತಿಯಾಗುವ ಮೊದಲು ಸೈನಾ 21-4 ಮುನ್ನಡೆಯಲ್ಲಿದ್ದರು. ಸೈನಾ ಮುಂದಿನ ಸುತ್ತಿನಲ್ಲಿ ಕೆನಡಾದ ರಾಚೆಲ್ ಹಾಂಡ್ರೆಚ್‌ರನ್ನು ಎದುರಿಸಲಿದ್ದಾರೆ.

 ಮಿಶ್ರ ಡಬಲ್ಸ್‌ನ ಅಂತಿಮ-16ರ ಸುತ್ತಿನಲ್ಲಿ ಪ್ರಣವ್ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಸಿಂಗಾಪುರದ ಡ್ಯಾನಿ ಕ್ರಿಸ್‌ನಾಂಟಾ ಹಾಗೂ ಜಿಯಾ ಯಿಂಗ್ ವಾಂಗ್‌ರನ್ನು 19-0, 21-2 ಅಂತರದಿಂದ ಸೋಲಿಸಿ ಕ್ವಾರ್ಟರ ಫೈನಲ್‌ಗೆ ತಲುಪಿದ್ದಾರೆ.ಪುರುಷರ ಡಬಲ್ಸ್ ತಂಡ ಸಾತ್ವಿಕ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ 2 ಸೆಟ್‌ಗಳಿಂದ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದು ಚೆನ್ ಹಾಗೂ ಹ್ಯೂಯಾಟ್ ಗೊರನ್ನು ಎದುರಿಸಲಿದ್ದಾರೆ.

 ಸ್ಕ್ವಾಷ್‌ನಲ್ಲಿ ಭಾರತ ಸೆಮಿಗೆ: ಸ್ಕ್ವಾಷ್‌ನ ಮಿಶ್ರ ಡಬಲ್ಸ್‌ನಲ್ಲಿ ದೀಪಿಕಾ ಪಲ್ಲಿಕಲ್ ಹಾಗೂ ಸೌರವ್ ಘೋಷಾಲ್ ವೇಲ್ಸ್ ತಂಡದ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿ ಸೆಮಿಫೈನಲ್‌ಗೆತಲುಪಿದ್ದಾರೆ. ಜೋಶ್ನಾ ಚಿನ್ನಪ್ಪ ಹಾಗೂ ಹರಿಂದರ್‌ಪಾಲ್ ಸಂಧು ನ್ಯೂಝಿಲೆಂಡ್‌ನ ಅಮಾಂಡ ಲ್ಯಾಂಡರ್ಸ್ ಹಾಗೂ ಝಾಖ್ ಮಿಲ್ಲರ್‌ರನ್ನು 2-1 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News