ಲಂಕಾ: 1 ತಿಂಗಳು ಸಂಸತ್ತನ್ನು ಅಮಾನತಿನಲ್ಲಿಟ್ಟ ಅಧ್ಯಕ್ಷ

Update: 2018-04-13 16:50 GMT

ಕೊಲಂಬೊ, ಎ. 13: ತನ್ನ ಮತ್ತು ತನ್ನ ಸರಕಾರದ ಪ್ರಧಾನಿ ನಡುವಿನ ಅಧಿಕಾರ ಜಗಳ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಗುರುವಾರ ಮುಂದಿನ ತಿಂಗಳವರೆಗೆ ಸಂಸತ್ತನ್ನು ಅಮಾನತಿನಲ್ಲಿಟ್ಟಿದ್ದಾರೆ.

ಸಂವಿಧಾನದ 70ನೆ ವಿಧಿಯನ್ವಯ, ಗುರುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಸಂಸತ್ತಿನ ಸಭೆಗಳನ್ನು ಅಧ್ಯಕ್ಷರು ಅಮಾನತಿನಲ್ಲಿಟ್ಟಿದ್ದಾರೆ ಎಂದು ಅಧ್ಯಕ್ಷರನ್ನು ಉಲ್ಲೇಖಿಸಿ ಸರಕಾರಿ ಆದೇಶವೊಂದು ತಿಳಿಸಿದೆ.

ತಾವು ಮೈತ್ರಿಕೂಟದಿಂದ ಹೊರಹೋಗುವುದಾಗಿ 6 ಕ್ಯಾಬಿನೆಟ್ ಸಚಿವರು ಸೇರಿದಂತೆ ಕನಿಷ್ಠ 16 ಸಿರಿಸೇನ ನಿಷ್ಠರು ಘೋಷಿಸಿದ ಗಂಟೆಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಅಧ್ಯಕ್ಷರು ಹೊರಡಿಸಿರುವ ಆದೇಶ ಮೇ 8ರವರೆಗೆ ಜಾರಿಯಲ್ಲಿರುತ್ತದೆ.

ಫೆಬ್ರವರಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿಕೂಟದ ಎರಡೂ ಪಕ್ಷಗಳು ಹಿನ್ನಡೆ ಅನುಭವಿಸಿದ ಬಳಿಕ, ಏಕತಾ ಸರಕಾರದಲ್ಲಿನ ಭಿನ್ನ ಗುಂಪುಗಳ ನಡುವಿನ ಸಂಬಂದ ಹಳಸಿದೆ.

ಇತ್ತೀಚಿನ ವಾರಗಳಲ್ಲಿ, ಪ್ರಧಾನಿ ರನಿಲ್ ವಿಕ್ರಮಸಿಂಘೆಯ ಹಲವು ಅಧಿಕಾರಗಳನ್ನು ಸಿರಿಸೇನ ಕಡಿತಗೊಳಿಸಿದ್ದರು. ಕೇಂದ್ರೀಯ ಬ್ಯಾಂಕ್, ನೀತಿ ರೂಪಿಸುವ ನ್ಯಾಶನಲ್ ಆಪರೇಶನ್ಸ್ ರೂಮ್ ಮತ್ತು ಇತರ ಹಲವಾರು ಸಂಸ್ಥೆಗಳ ನಿಯಂತ್ರಣವನ್ನು ಪ್ರಧಾನಿಯಿಂದ ಹಿಂದಕ್ಕೆ ಪಡೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News