ಎಚ್ಚರಿಕೆ... ಕುಡಿಯಲು ನೀರಿಲ್ಲದ ದಿನಗಳೂ ಬರಲಿವೆ

Update: 2018-04-13 18:45 GMT

ಟಿವಿ, ಸಾಮಾಜಿಕ ಜಾಲತಾಣ ಹಾಗೂ ಸುದ್ದಿಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಸಾರ ಮಾಡಲಾದ ಮನವಿ ಹಾಗೂ ಪರಿಸರ ಅಭಿಯಾನಗಳು, ನಿಮ್ಮ ಮನೆಯ ನಳ್ಳಿಗಳಲ್ಲಿ ನೀರು ಹರಿಯುವ ದಿನಗಳು ಕಳೆದುಹೋಗಿವೆ ಎಂದು ಎಚ್ಚರಿಕೆ ನೀಡುತ್ತಲೇ ಇವೆ. ಹೌದು. ಉಪಗ್ರಹಗಳಿಂದ ಲಭ್ಯವಾದ ನೂತನ ಸಾಕ್ಷಾಧಾರಗಳು ಕೂಡಾ ಆ ದಿನ ಶೀಘ್ರದಲ್ಲೇ ಆಗಮಿಸುತ್ತಿದೆಯೆಂಬುದನ್ನು ಬಹಿರಂಗಪಡಿಸಿದೆ.

ನೂತನ ತ್ವರಿತ ಮುನ್ನೆಚ್ಚರಿಕೆ ಉಪಗ್ರಹ (ಇಡಬ್ಲುಎಸ್)ವು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಈ ಬಗ್ಗೆ ಎಚ್ಚರಿಕೆಯೊಂದನ್ನು ನೀಡಿದ್ದು, ‘‘ನಳ್ಳಿಗಳು ಸಂಪೂರ್ಣವಾಗಿ ಬತ್ತಿ ಹೋಗಲಿವೆ’ ಎಂದಿದೆ. ಮೊರಾಕ್ಕೊ, ಇರಾಕ್ ಹಾಗೂ ಸ್ಪೇನ್ ನೀರಿನ ಭೀಕರ ಕ್ಷಾಮದ ಭೀತಿಯನ್ನು ಎದುರಿಸುತ್ತಿರುವ ಇತರ ಕೆಲವು ದೇಶಗಳಾಗಿವೆ. ಜಗತ್ತಿನಾದ್ಯಂತ ಜಲಾಶಯಗಳಲ್ಲಿ ಕುಸಿಯುತ್ತಿರುವ ನೀರಿನ ಮಟ್ಟದ ಬಗ್ಗೆ ಉಪಗ್ರಹವು ಅಧ್ಯಯನ ನಡೆಸುತ್ತಿದೆ.

 ಗಾರ್ಡಿಯನ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಜಗತ್ತಿನಾದ್ಯಂತದ ಸುಮಾರು 50 ಸಾವಿರ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವನ್ನು ದಾಖಲಿಸುವ ತ್ವರಿತ ಮುನ್ನೆಚ್ಚರಿಕೆ ವ್ಯವಸ್ಥೆಯ ಉಪಗ್ರಹವು ಶೀಘ್ರದಲ್ಲೇ ಭಾರತವು ‘ಶೂನ್ಯ ದಿನ’ದ ನೀರಿನ ಬಿಕ್ಕಟ್ಟಿನೆಡೆಗೆ ಸಾಗಲಿದೆಯೆಂದು ಹೇಳಿದೆ. ಭಾರತದ ಅಣೆಕಟ್ಟುಗಳಲ್ಲಿ ಹಾಗೂ ಜಲಾಶಯಗಳಲ್ಲಿನ ನೀರಿನ ಮಟ್ಟ, ಅವುಗಳ ಬಳಕೆ ಹಾಗೂ ತಾಜ್ಯ, ಹವಾಮಾನ ಬದಲಾವಣೆಯ ಪರಿಣಾಮದ ಕುರಿತ ವಿವರಗಳನ್ನು ಈ ಅಧ್ಯಯನವು ತೋರಿಸಿಕೊಟ್ಟಿದೆ. ಈ ಅಧ್ಯಯನವನ್ನು ಆಧರಿಸಿ ಅದು ಭಾರತದಲ್ಲಿನ ನಳ್ಳಿಗಳು ಈ ಮೊದಲು ಭವಿಷ್ಯ ನುಡಿದಿದ್ದಕ್ಕಿಂತಲೂ ತುಂಬಾ ಮುಂಚಿತವಾಗಿಯೇ ಬತ್ತಿಹೋಗಲಿದೆಯೆಂದು ಎಚ್ಚರಿಕೆ ನೀಡಿದೆ.

ಭಾರತದಲ್ಲಿ ನೀರಿನ ಬಿಕ್ಕಟ್ಟು
ಭಾರತದ ವಿಷಯಕ್ಕೆ ಬರುವುದಾದರೆ, ಹಲವು ರಾಜ್ಯಗಳು ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿವೆ. ನರ್ಮದಾ ನದಿಯೊಂದಿಗೆ ಜೋಡಿಸಲ್ಪಟ್ಟ ಎರಡು ಜಲಾಶಯಗಳಲ್ಲಿನ ನೀರಿನ ಹಂಚಿಕೆ ಕುರಿತ ವಿವಾದಗಳು ಭುಗಿಲೆದ್ದಿರುವುದು ಸಹಜವೇ ಆಗಿದೆಯೆಂದು ಅಧ್ಯಯನವು ಬಹಿರಂಗಪಡಿಸಿದೆ.
ಕಳೆದ ವರ್ಷ ದುರ್ಬಲ ಮಳೆಯಾದುದರಿಂದಾಗಿ ಮಧ್ಯಪ್ರದೇಶದಲ್ಲಿ ನರ್ಮದಾ ನದಿಗೆ ಕಟ್ಟಲಾದ ಇಂದಿರಾ ಸಾಗರ್ ಅಣೆಕಟ್ಟು, ಮಳೆಗಾಲದಲ್ಲಿನ ಸರಾಸರಿ ಮಟ್ಟಕ್ಕಿಂತಲೂ ಮೂರನೆ ಒಂದಶದಷ್ಟು ಕಡಿಮೆ ನೀರು ಸಂಗ್ರಹಗೊಂಡಿದೆ. ಈ ಅಣೆಕಟ್ಟಿನಲ್ಲಿನ ನೀರಿನ ಕೊರತೆಯಿಂದಾಗಿ, ಸರ್ದಾರ್ ಸರೋವರ ಜಲಾಶಯಕ್ಕೆ ನೀರು ಪೂರೈಕೆಯನ್ನು ಕಡಿಮೆ ಗೊಳಿಸಿದ ಕಾರಣ ಭಾರೀ ಕೋಲಾಹಲವುಂಟಾಯಿತು. ಯಾಕೆಂದರೆ, ಸರ್ದಾರ್ ಸರೋವರ್ ಜಲಾಶಯವು ಸುಮಾರು 3 ಕೋಟಿಗೂ ಅಧಿಕ ಮಂದಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿದೆ.

ಕಳೆದ ತಿಂಗಳು ಪಿಟಿಐ ಸುದ್ದಿಸಂಸ್ಥೆ ಪ್ರಕಟಿಸಿದ ವರದಿಯ ಪ್ರಕಾರ, ಗುಜರಾತ್ ಸರಕಾರವು ನೀರಾವರಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದೆ ಹಾಗೂ ತಾತ್ಕಾಲಿಕವಾಗಿ ಯಾವುದೇ ಬೆಳೆಗಳಿಗೆ ಬಿತ್ತನೆ ಕಾರ್ಯ ಕೈಗೊಳ್ಳದಂತೆ ಮನವಿ ಮಾಡಿದೆ.

ಜಾಗತಿಕ ಮಟ್ಟದಲ್ಲಿ ನೀರಿನ ಬರ
ಮೂರು ವರ್ಷಗಳಿಂದ ನಿರಂತರವಾಗಿ ಬರಗಾಲವನ್ನೆದುರಿಸುತ್ತಿರುವ ದಕ್ಷಿಣ ಆಫ್ರಿಕದ ಕೇಪ್‌ಟೌನ್ ನಗರದ ಲಕ್ಷಾಂತರ ನಿವಾಸಿಗಳಿಗೆ ನಳ್ಳಿಗಳಲ್ಲಿ ನೀರು ಲಭ್ಯವಾಗದೆ ಹೋಗುವ ದಿನದ ಕ್ಷಣಗಣನೆಯನ್ನು ನಗರಾಡಳಿತವು ಅಧಿಕೃತವಾಗಿ ಆರಂಭಿಸಿರುವುದು ವಿಶ್ವದ ಗಮನವನ್ನು ಸೆಳೆದಿದೆ.
 ವ್ಯಾಪಕವಾದ ಜಲಸಂರಕ್ಷಣಾ ಕಾರ್ಯಕ್ರಮಗಳು ದಕ್ಷಿಣ ಆಫ್ರಿಕದಲ್ಲಿ ಸದ್ಯಕ್ಕೆ ಈ ಅನಾಹುತವನ್ನು ತಪ್ಪಿಸಿದೆ. ಆದಾಗ್ಯೂ, ಹೆಚ್ಚುತ್ತಿರುವ ನೀರಿನ ಬೇಡಿಕೆ ಹಾಗೂ ನೀರಿನ ಕಳಪೆ ನಿರ್ವಹಣೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ಇತರ ಡಝನ್‌ಗಟ್ಟಲೆ ದೇಶಗಳು ಇದೇ ರೀತಿಯ ಅಪಾಯವನ್ನು ಎದುರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ನೀರಿನ ಸಂರಕ್ಷಣೆ ಹಾಗೂ ಭದ್ರತೆಗೆ ಸಂಬಂಧಿಸಿ ತ್ವರಿತ ಮುನ್ನೆಚ್ಚರಿಕೆ ವ್ಯವಸ್ಥೆಯೊಂದನ್ನು ರೂಪಿಸುವ ಬಗ್ಗೆ ಅಮೆರಿಕ ಮೂಲದ ಪರಿಸರರಕ್ಷಣಾ ಸಂಸ್ಥೆಯು, ಡೆಲಾಟ್ರೆಸ್, ಡಚ್ ಸರಕಾರ ಹಾಗೂ ಇತರ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ. ಸಾಮಾಜಿಕ ಅಸ್ಥಿರತೆ, ಆರ್ಥಿಕ ಹಾನಿ ಹಾಗೂ ಗಡಿಯಾಚೆಗಿನ ವಲಸೆಯನ್ನು ತಡೆಗಟ್ಟುವುದೇ ಇದರ ಉದ್ದೇಶವಾಗಿದೆ. ಈ ಯೋಜನೆಯ ಮೂಲ ಮಾದರಿಯನ್ನು ಈ ವರ್ಷದ ಅಂತ್ಯದಲ್ಲಿ ಹೊರತರಲಾಗಿದೆ. ಆದರೆ ಅದರ ಕಿರುಪರಿಚಯವನ್ನು ಎಪ್ರಿಲ್ 11ರಂದು ಅನಾವರಣಗೊಳಿಸಲಾಗಿದ್ದು, ಅದು ನೀರಿನ ಬರದಿಂದ ಘೋರವಾಗಿ ಪೀಡಿತವಾದ ಅಣೆಕಟ್ಟುಗಳು ಹಾಗೂ ಎದುರಾಗಬಹುದಾದ ಸಂಭಾವ್ಯ ಅಪಾಯಗಳ ಬಗ್ಗೆಯೂ ಬೆಳಕು ಚೆಲ್ಲಿದೆ.

 ಪುನರಾವರ್ತನೆಯಾಗುತ್ತಿರುವ ಬರ. ನೀರಾವರಿ ಕೃಷಿಯ ವಿಸ್ತರಣೆ ಹಾಗೂ ಕಾಸಾಬ್ಲಾಂಕಾದಂತಹ ನಗರಗಳಲ್ಲಿ ಹೆಚ್ಚಿತ್ತಿರುವ ನೀರಿನ ಬೇಡಿಕೆ ಇವೆಲ್ಲವುಗಳಿಂದಾಗಿ ಮೊರಾಕ್ಕೊದ ಎರಡನೆ ಅತಿ ದೊಡ್ಡ ಜಲಾಶಯವಾದ ಅಲ್ ಮಸ್ಸಿರಾದಲ್ಲಿ ನೀರಿನ ಮಟ್ಟವು ಕಳೆದ ಮೂರು ವರ್ಷಗಳಲ್ಲಿ ಶೇ. 60ರಷ್ಟು ಕುಸಿತವನ್ನು ಕಂಡಿದೆ.
ಸ್ಪೇನ್ ನಗರವು ಕೂಡಾ ತೀವ್ರವಾದ ಬರವನ್ನು ಎದುರಿಸುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ಬುಯೆಂದಿಯಾ ಅಣೆಕಟ್ಟಿನ ಮೇಲ್ಮೈನ ನೀರಿನ ಪ್ರಮಾಣದಲ್ಲಿ ಶೇ.60ರಷ್ಟು ಇಳಿಕೆಯಾಗಿದೆ.

ಇರಾಕ್‌ನಲ್ಲಿ ಮೊಸುಲ್ ಅಣೆಕಟ್ಟು ಕೂಡಾ ದೀರ್ಘಸಮಯದಿಂದ ನೀರಿನ ಪ್ರಮಾಣದಲ್ಲಿ ಕುಸಿತವನ್ನು ಕಾಣುತ್ತಾ ಬರುತ್ತಿದೆ. ಇಲ್ಲಿಯೂ ಕೂಡಾ 1990ರ ದಶಕದಲ್ಲಿದ್ದ ನೀರಿನ ಸಂಗ್ರಹಕ್ಕಿಂತ ಶೇ.60ರಷ್ಟು ಕುಸಿತ ಕಂಡುಬಂದಿದೆ. ಕಡಿಮೆ ಪ್ರಮಾಣದ ಮಳೆ ಹಾಗೂ ಟೈಗ್ರಿಸ್ ಹಾಗೂ ಯೂಫ್ರೆಟೀಸ್ ನದಿಗಳ ಮೇಲ್ದಂಡೆಗಳಲ್ಲಿರುವ ಟರ್ಕಿಶ್ ಜಲವಿದ್ಯುತ್ ಯೋಜನೆಗಳಿಂದ ಹೆಚ್ಚುತ್ತಿರುವ ನೀರಿನ ಬೇಡಿಕೆ, ಈ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಳವಳಕಾರಿ ಪ್ರಮಾಣದಲ್ಲಿ ಕುಸಿಯಲು ಕಾರಣವಾಗಿದೆ.

Writer - ಅಭಿಷೇಕ್ ಚಕ್ರವರ್ತಿ

contributor

Editor - ಅಭಿಷೇಕ್ ಚಕ್ರವರ್ತಿ

contributor

Similar News