ಯುಎಇ: ವಾಹನಗಳಲ್ಲಿ ಇನ್ನು ಈ ವ್ಯವಸ್ಥೆ ಕಡ್ಡಾಯ

Update: 2018-04-14 16:38 GMT

ದುಬೈ, ಎ. 14: ಯುಎಇಯು ತುರ್ತು ಕರೆ (ಇ-ಕಾಲ್) ವ್ಯವಸ್ಥೆಯನ್ನು ಎಲ್ಲ ವಾಹನಗಳಲ್ಲಿ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಇದು ರಸ್ತೆ ಅಪಘಾತಗಳ ಸಂದರ್ಭದಲ್ಲಿ ಅವುಗಳು ನೆರವು ಪಡೆಯುವ ಸಮಯವನ್ನು 40 ಶೇಕಡದಷ್ಟು ಕಡಿಮೆಗೊಳಿಸಲಿದೆ.

ಇ-ಕಾಲ್ ತುರ್ತು ಸಂವಹನ ವ್ಯವಸ್ಥೆಯನ್ನು ಯುಎಇಯಲ್ಲಿ 2021ರ ವಾಹನ ಮಾದರಿಗಳಿಗೆ ಅಳವಡಿಸಲಾಗುವುದು ಹಾಗೂ ಈ ವಾಹನಗಳು 2020ರಲ್ಲಿ ಯುಎಇ ಮಾರುಕಟ್ಟೆ ತಲುಪುತ್ತವೆ ಎಂದು ‘ಎಸ್ಮ’ದ ಮಹಾನಿರ್ದೇಶಕ ಅಬ್ದುಲ್ಲಾ ಅಲ್ ಮಯೀನಿ ತಿಳಿಸಿದರು.

ವಾಹನಗಳಲ್ಲಿ ಅಳವಡಿಸುವ ‘ಇ-ಕಾಲ್’ ವ್ಯವಸ್ಥೆಯ ತಾಂತ್ರಿಕ ಅಂಶಗಳಿಗೆ ಯುಇಎ ಸಚಿವ ಸಂಪುಟ ಕಳೆದ ವಾರ ಅಂಗೀಕಾರ ನೀಡಿದೆ.

ಇಂಥ ವ್ಯವಸ್ಥೆಯನ್ನು ಐರೋಪ್ಯ ಒಕ್ಕೂಟದಲ್ಲಿ ಅಳವಡಿಸಲಾದ ಬಳಿಕ, ಎರಡನೆಯದಾಗಿ ಯುಎಇಯಲ್ಲಿ ಜಾರಿಗೊಳಿಸುತ್ತಿದೆ.

‘‘ಈ ವ್ಯವಸ್ಥೆಯಲ್ಲಿ, ವಾಹನಗಳು ಅಪಘಾತಕ್ಕೀಡಾದ ಸಂದರ್ಭದಲ್ಲಿ ಯುಎಇ ಸರಕಾರದ ಸಂಬಂಧಪಟ್ಟ ಸಂಸ್ಥೆಗಳು ಅಪಘಾತ ಸ್ಥಳಕ್ಕೆ ಸಾಧ್ಯವಿರುವ ಅತ್ಯಂತ ಕಡಿಮೆ ಸಮಯದಲ್ಲಿ ಧಾವಿಸುತ್ತದೆ. ಅಂದರೆ, ಕೆಲವೇ ನಿಮಿಷಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿರುತ್ತಾರೆ. ಈ ಬಗ್ಗೆ ನಾವು 3 ವರ್ಷಗಳಿಂದ ಅಧ್ಯಯನ ಮತ್ತು ಸಂಶೋಧನೆಗಳನ್ನು ಮಾಡಿದ್ದೇವೆ ಹಾಗು ಯುಎಇಯಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳನ್ನು ಭೇಟಿಯಾಗಿದ್ದೇವೆ’’ ಎಂದು ‘ಎಸ್ಮ’ದ ಮಹಾನಿರ್ದೇಶಕ ಅಬ್ದುಲ್ಲಾ ಅಲ್ ಮಯೀನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News