ಏಕಕಾಲದಲ್ಲಿ ರಜೆ ನೀಡಲು ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

Update: 2018-04-14 18:24 GMT

ಬೆಂಗಳೂರು, ಎ.14: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಮೇ ತಿಂಗಳಲ್ಲಿ ನೀಡುವ ರಜೆಯನ್ನು ಏಕಕಾಲದಲ್ಲಿಯೇ ನೀಡಬೇಕೆಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾ ಮಂಡಳಿ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿಯ ಅಧ್ಯಕ್ಷ ಜಿ.ಆರ್.ಶಿವಶಂಕರ್, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಮೇ ತಿಂಗಳಿನಲ್ಲಿ ಏಕಕಾಲದಲ್ಲಿಯೇ ನೀಡುತ್ತಿದ್ದ ರಜೆ ಕ್ರಮವನ್ನು ಬದಲಾಯಿಸಿ ಪ್ರತ್ಯೇಕವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ 15 ದಿನ ಕಾರ್ಯಕರ್ತೆಯರ ರಜೆ ಮುಗಿದ ನಂತರ ಸಹಾಯಕಿಯರಿಗೆ 15 ದಿನ ರಜೆಯನ್ನು ನೀಡಿ ಎಂದು ಸರಕಾರ ಆದೇಶಿಸಿರುವುದು ಸರಿಯಲ್ಲ ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಪ್ರತ್ಯೇಕವಾಗಿ 15 ದಿನಗಳ ರಜೆಯನ್ನು ನೀಡಿದ್ದರೆ 15 ದಿನಗಳ ಕಾಲ ಸಹಾಯಕಿಯರು ಅಥವಾ ಕಾರ್ಯಕರ್ತೆಯರು ಒಬ್ಬರೇ ಕೆಲಸ ಮಾಡಬೇಕು. ಒಬ್ಬರಿಂದಲೇ ಅಂಗನವಾಡಿ ಕೇಂದ್ರ ನಿರ್ವಹಣೆ ಸಾಧ್ಯವಿಲ್ಲ. ಹೀಗಾಗಿ, ಇಬ್ಬರಿಗೂ ಏಕ ಕಾಲದಲ್ಲಿಯೇ ರಜೆ ನೀಡಬೇಕು ಎಂದು ಒತ್ತಾಯಿಸಿದ ಅವರು, ಸರಕಾರ ನಮ್ಮ ಮನವಿಯನ್ನು ಪರಿಗಣಿಸದಿದ್ದರೆ ಈ ಆದೇಶ ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News