ಉಳ್ಳಾಲ ಹಲ್ಲೆ: ಟ್ರೋಲ್ ಪಡೆ ಕಟ್ಟಿಕೊಂಡ ಆತ್ಮರತಿ ನಾಯಕರು ಇನ್ನಾದರೂ ಎಚ್ಚೆತ್ತುಕೊಳ್ಳಲಿ

Update: 2018-04-15 18:46 GMT

ಮಾನ್ಯರೇ,

 ಇತ್ತೀಚೆಗೆ ಸಚಿವ ಯು.ಟಿ. ಖಾದರ್‌ರ ಕ್ಷೇತ್ರದಲ್ಲಿ ಅಮಾಯಕನೊಬ್ಬನ ಮೇಲೆ ರೌಡಿ ಶೀಟರ್ ಒಬ್ಬ ನಡೆಸಿದ ಹಲ್ಲೆಯ ಕುರಿತ ಸುದ್ದಿ ರವಿವಾರದ ‘ವಾರ್ತಾ ಭಾರತಿ’ಯಲ್ಲಿ ಓದಿದೆ. ಬುದ್ಧಿವಂತರ ಜಿಲ್ಲೆ, ಸುಶಿಕ್ಷಿತರ ಜಿಲ್ಲೆ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಆಘಾತಕಾರಿ ಘಟನೆಗಳು ನಡೆಯುತ್ತಿವೆ ಎಂಬುದನ್ನು ಓದುವಾಗ ಆಘಾತವಾಗುತ್ತದೆ. ಈ ದುಷ್ಕರ್ಮಿಗಳನ್ನು ಹೆಡೆಮುರಿ ಕಟ್ಟುವ ಪೊಲೀಸರು ಹಾಗೂ ಅವರ ಕೆಲಸವನ್ನು ಸರಿಯಾಗಿ ಮಾಡಲು ಬಿಡುವ ರಾಜಕಾರಣಿಗಳು ಇದ್ದರೆ ಇಂತಹ ಘಟನೆಗಳು ನಡೆಯಲು ಸಾಧ್ಯವೇ ಇಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದುಷ್ಕರ್ಮಿಗಳು ಹಾಗೂ ಕ್ರಿಮಿನಲ್‌ಗಳಿಗೆ ರಾಜಕೀಯ ಆಶ್ರಯ ಇದೆ ಎಂಬುದು ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ. ಇಲ್ಲದಿದ್ದರೆ ಹೀಗೆ ರಾಜಾರೋಷವಾಗಿ ಬಿಹಾರ, ಉತ್ತರ ಪ್ರದೇಶಗಳಲ್ಲಿ ನಡೆದಂತೆ ಹಲ್ಲೆ, ಕೊಲೆ ಮಾಡಲು ಸಾಧ್ಯವೇ ಇಲ್ಲ.

‘ವಾರ್ತಾ ಭಾರತಿ’ಯಲ್ಲಿ ಈ ಕುರಿತ ವರದಿ ಪ್ರಕಟವಾದ ಕೂಡಲೇ ವಾಟ್ಸ್‌ಆ್ಯಪ್‌ನಲ್ಲಿ ‘ವಾರ್ತಾಭಾರತಿ’ ವಿರುದ್ಧ ಕೀಳು ಅಭಿರುಚಿಯ, ಕಪೋಲಕಲ್ಪಿತ ಆರೋಪಗಳ ಮೆಸೇಜ್‌ಗಳು ಹರಡುವುದನ್ನು ಗಮನಿಸಿದೆ. ತಮ್ಮ ನಾಯಕರ ತಪ್ಪನ್ನು ಎತ್ತಿ ತೋರಿಸಿದರೆ ಮುಗಿಬೀಳುವ ಸಂಘ ಪರಿವಾರದ ಟ್ರೋಲ್ ಪಡೆಗೂ ಇವರಿಗೂ ಸಾಕಷ್ಟು ಸಾಮ್ಯತೆ ಇದೆ. ಜಾತ್ಯತೀತ ಪತ್ರಿಕೆ ಎಂದರೆ ಕಾಂಗ್ರೆಸ್ ಮುಖಂಡರ ಗುಣಗಾನ ಮಾಡುವ ಪತ್ರಿಕೆ ಎಂದು ಈ ದುರಭಿಮಾನಿ ಟ್ರೋಲ್‌ಗಳು ಹಾಗೂ ಅವರ ನಾಯಕರು ಭಾವಿಸಿದ್ದಾರೆ. ಇವರ ತಪ್ಪು ಧೋರಣೆಗಳ ಬಗ್ಗೆ ವರದಿ, ಲೇಖನ ಪ್ರಕಟಿಸಿದರೆ ಜಾತ್ಯತೀತತೆಗೆ ಧಕ್ಕೆಯಾಗುವುದು ಹೇಗೆ? ಇದೆಂತಹ ಅಸಂಬದ್ಧ ಲಾಜಿಕ್? ಹಾಗಾದರೆ ಇವರು ಮಾಡುವ ಎಡವಟ್ಟುಗಳು, ಇವರ ಅದಕ್ಷತೆ , ಕರ್ತವ್ಯ ಲೋಪ, ಭ್ರಷ್ಟಾಚಾರ ಇತ್ಯಾದಿಗಳಿಂದ ಜಾತ್ಯತೀತ ತತ್ವಕ್ಕೆ ನಷ್ಟವಾಗುವುದಿಲ್ಲವೇ?

ಚೇಲಾಗಳನ್ನೇ ನೋಡಿ, ಖುಷಿಪಟ್ಟು ಅಭ್ಯಾಸವಾಗಿರುವ ಕರಾವಳಿಯ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಆತ್ಮರತಿ ಮಾಡಿಕೊಳ್ಳುವ ಚಟ ಬಹಳ ಜೋರಾಗಿದೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳದಿದ್ದರೆ ಬಹಳ ಬೇಗ ಇವರು ಅಪ್ರಸ್ತುತರಾಗುತ್ತಾರೆ. ತಮ್ಮ ಬಗ್ಗೆ ಭಟ್ಟಂಗಿಗಳ ಗುಣಗಾನವನ್ನು ಮಾತ್ರ ಸಹಿಸುವ ಈ ನಾಯಕರು ತಮ್ಮ ಟ್ರೋಲ್ ಪಡೆಗಳನ್ನು ಸಾಕಲು ವ್ಯಯಿಸುವ ಸಂಪನ್ಮೂಲ ಹಾಗೂ ಸಮಯವನ್ನು ಕಾಂಗ್ರೆಸ್ ಸಿದ್ಧಾಂತವನ್ನು ಪ್ರಚಾರ ಮಾಡಲು ಬಳಸಿದರೆ ಕರಾವಳಿಯಲ್ಲಿ ಸಂಘ ಪರಿವಾರ ಇಷ್ಟು ಬಲಿಷ್ಠವಾಗಿ ಬೆಳೆಯುತ್ತಿರಲಿಲ್ಲ. ಸಿದ್ದರಾಮಯ್ಯನವರ ಜನಪ್ರಿಯತೆ, ಪ್ರಭಾವ ಬಳಸಿಕೊಂಡು ಅವರ ಅಲೆಯಲ್ಲಿ ತೇಲಿಕೊಂಡು ಹೋಗಿ ಮತ್ತೆ ಅಧಿಕಾರ ಗಿಟ್ಟಿಸುವ ಅಮಲಿನಲ್ಲಿರುವ ಈ ಮುಖಂಡರು ರಚನಾತ್ಮಕ ಟೀಕೆಯನ್ನು ಧನಾತ್ಮಕವಾಗಿ ಸ್ವೀಕರಿಸಿ ತಪ್ಪು ತಿದ್ದಿಕೊಳ್ಳುವ ಬುದ್ಧಿಯನ್ನು ಇನ್ನಾದರೂ ಕಲಿತುಕೊಳ್ಳಲಿ.

Writer - ಸುಧೀರ್ ಶೆಟ್ಟಿ , ಮಂಗಳೂರು

contributor

Editor - ಸುಧೀರ್ ಶೆಟ್ಟಿ , ಮಂಗಳೂರು

contributor

Similar News