ಭಾರತದಲ್ಲೂ ನಿರ್ಮಾಣವಾಗುತ್ತಿದೆ 'ಮಹಾಗೋಡೆ': ಎಲ್ಲಿ ಗೊತ್ತೇ?

Update: 2018-04-16 03:56 GMT

ಹೊಸದಿಲ್ಲಿ, ಎ.16: ಚೀನಾದ ಮಹಾಗೋಡೆ ಬಗ್ಗೆ ನೀವು ಕೇಳಿದ್ದೀರಿ. ಭಾರತದಲ್ಲೂ 500 ಕಿಲೋಮೀಟರ್ ಮಹಾಗೋಡೆ ನಿರ್ಮಾಣವಾಗುತ್ತಿರುವ ಬಗ್ಗೆ ಗೊತ್ತೇ? ಆದರೆ ಇದು ಒಂದೇ ಗೋಡೆಯಲ್ಲ. ಮುಂಬೈ- ದಿಲ್ಲಿ ರೈಲು ಹಳಿಯ ಪಕ್ಕದಲ್ಲಿ ರೈಲು ಸಂಚಾರ ಸುಲಲಿತಗೊಳಿಸುವ ಸಲುವಾಗಿ 500 ಕೋಟಿ ರೂ. ವೆಚ್ಚದಲ್ಲಿ ರಕ್ಷಣಾ ಗೋಡೆ ನಿರ್ಮಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ರೈಲು ಹಳಿಗಳ ಇಕ್ಕೆಲಗಳಲ್ಲಿ 500 ಕಿಲೋಮೀಟರ್ ಆವರಣ ಗೋಡೆ ನಿರ್ಮಾಣವಾಗಲಿದ್ದು, ಹಳಿಗಳಲ್ಲಿ ಮನುಷ್ಯ ಹಾಗೂ ಜಾನುವಾರುಗಳು ಓಡಾಡದಂತೆ ತಡೆದು, ಸುಗಮ ಸಂಚಾರಕ್ಕಾಗಿ ಈ ಯೋಜನೆ ಕಾಮಗಾರಿ ಆರಂಭಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಮನುಷ್ಯ ಮತ್ತು ಜಾನುವಾರುಗಳು ಹಳಿಯಲ್ಲಿ ಚಲಿಸುವುದರಿಂದ ರೈಲುಗಳ ವೇಗಕ್ಕೆ ತಡೆಯಾಗಿದ್ದು, ಇದನ್ನು ನಿವಾರಿಸುವುದು ಯೋಜನೆಯ ಉದ್ದೇಶ ಎಂದು ಭಾರತೀಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ- ದಿಲ್ಲಿ ಕಾರಿಡಾರ್ ಅತಿವೇಗದ ವಲಯವಾಗಿ ಮಾರ್ಪಡುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ಹಳಿ ಬದಲಾಯಿಸಿದ ತಕ್ಷಣ ರೈಲುಗಳು ಗರಿಷ್ಠ ವೇಗದ ಮಿತಿಯಾದ 160 ಕಿಲೋಮೀಟರ್ ವೇಗ ಪಡೆಯಲು ಇದು ನೆರವಾಗಲಿದೆ ಎಂದು ವಿವರಿಸಿದ್ದಾರೆ.

ಪ್ರಸ್ತುತ ಈ ಮಾರ್ಗದಲ್ಲಿ ರೈಲುಗಳು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತಿವೆ. ಗರಿಷ್ಠ ವೇಗ ಪಡೆಯಲು ಸಾಧ್ಯವಾಗದಿರಲು ಮುಖ್ಯ ಕಾರಣ ಮನುಷ್ಯ ಹಾಗೂ ಜಾನುವಾರುಗಳ ಮಧ್ಯಪ್ರವೇಶ. ಈ ಅಂತರವನ್ನು ವೇಗವಾಗಿ ಕ್ರಮಿಸುವ ರೈಲುಗಳೆಂದರೆ ರಾಜಧಾನಿ ರೈಲುಗಳು. ಎರಡು ನಗರಗಳ ನಡುವಿನ ಅಂತರಕ್ಕೆ ಈ ರೈಲು 16 ಗಂಟೆ ತೆಗೆದುಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News