ಸ್ಕೈಪ್ ಮೂಲಕ ವಿಚ್ಛೇದನಕ್ಕೆ ಅನುಮತಿಗೆ ಎನ್ನಾರೈ ಮಹಿಳೆಗೆ ಹೈಕೋರ್ಟ್ ಅವಕಾಶ

Update: 2018-04-17 16:46 GMT

ಮುಂಬೈ,ಎ.17: ತನ್ನ ಪರಿತ್ಯಕ್ತ ಪತಿಯಿಂದ ಪರಸ್ಪರ ಸಮ್ಮತಿಯ ವಿವಾಹ ವಿಚ್ಛೇದನವನ್ನು ಕೋರಿರುವ ಎನ್ನಾರೈ ಮಹಿಳೆ ಸ್ಕೈಪ್ ಅಥವಾ ಇತರ ಯಾವುದೇ ವೀಡಿಯೊ ಕರೆ ತಂತ್ರಜ್ಞಾನದ ಮೂಲಕ ಒಪ್ಪಿಗೆಯನ್ನು ಸೂಚಿಸಲು ಬಾಂಬೆ ಉಚ್ಚ ನ್ಯಾಯಾಲಯವು ಹಸಿರು ನಿಶಾನೆಯನ್ನು ತೋರಿಸಿದೆ.

ಈ ಆದೇಶವನ್ನು ಹೊರಡಿಸಿದ ನ್ಯಾ.ಭಾರತಿ ಡಾಂಗ್ರೆ ಅವರು, ಅಮೆರಿಕದಲ್ಲಿ ನೆಲೆಸಿರುವ ಮಹಿಳೆಯು ವಿಚ್ಛೇದನವನ್ನು ಕೋರಿ ಅರ್ಜಿಯನ್ನು ಸಲ್ಲಿಸಿದಾಗ ದೈಹಿಕವಾಗಿ ಉಪಸ್ಥಿತವಿರಲಿಲ್ಲ ಎಂಬ ಕಾರಣದಿಂದ ಅದನ್ನು ಅಂಗೀಕರಿಸಲು ನಿರಾಕರಿಸಿದ್ದ ಕುಟುಂಬ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ್ದರು. ಮಹಿಳೆ ಕುಟುಂಬ ನ್ಯಾಯಾಲಯದ ಆದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಪ್ರಕರಣವನ್ನು ಮುಂದುವರಿಸಲು ಮಹಿಳೆಯ ತಂದೆ ಆಕೆಯ ಪವರ್ ಆಫ್ ಅಟಾರ್ನಿಯಾಗಿ ಕಾರ್ಯ ನಿರ್ವಹಿಸಲು ನ್ಯಾ.ಡಾಂಗ್ರೆ ಅನುಮತಿ ನೀಡಿದ್ದಾರೆ.

ಪರಸ್ಪರ ಸಮ್ಮತಿಯ ವಿಚ್ಛೇದನಕ್ಕೆ ಸ್ಕೈಪ್ ಅಥವಾ ಇತರ ಯಾವುದೇ ವೀಡಿಯೊ ಕರೆ ತಂತ್ರಜ್ಞಾನದ ಮೂಲಕ ಮಹಿಳೆಯ ಒಪ್ಪಿಗೆಯನ್ನು ದಾಖಲಿಸಿಕೊಳ್ಳುವಂತೆ ಅವರು ಕುಟುಂಬ ನ್ಯಾಯಾಲಯಕ್ಕೆ ಸೂಚಿಸಿದ್ದಾರೆ.

ದಂಪತಿ 2002ರಲ್ಲಿ ವಿವಾಹವಾಗಿದ್ದು, 2016ರಿಂದ ಪ್ರತ್ಯೇಕವಾಗಿ ವಾಸವಾಗಿ ದ್ದಾರೆ. ಮಹಿಳೆ ಬಳಿಕ ಅಮೆರಿಕದಲ್ಲಿ ನೆಲೆಸಿದ್ದಾಳೆ. ದಂಪತಿ ಕಳೆದ ವರ್ಷ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನವನ್ನು ಕೋರಿ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News